ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು (Maha Kumbh 2025) ಭರ್ಜರಿ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ. ತ್ರಿವೇಣಿ ಸಂಗಮದಲ್ಲಿಇದುವರೆಗೆ ಸುಮಾರು 62 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಇದರ ಬೆನ್ನಲ್ಲೇ, ಕುಂಭಮೇಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರ ದಾರಿ ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ 140 ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ವಿರುದ್ಧ 13 ಎಫ್ಐಆರ್ ದಾಖಲಿಸಲಾಗಿದೆ.
ಮಹಾ ಕುಂಭದ ಡಿಐಜಿ ವೈಭವ್ ಕೃಷ್ಣ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ಜನರ ದಾರಿ ತಪ್ಪಿಸುವ ಮಾಹಿತಿ ಪಸರಿಸಿದ ಹಿನ್ನೆಲೆಯಲ್ಲಿ ಸುಮಾರು 140 ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ವಿರುದ್ಧ 13 ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕುಂಭಮೇಳದ ಕುರಿತು ಯಾರೇ ವದಂತಿ ಹಬ್ಬಿಸಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಶಿವರಾತ್ರಿ ವೇಳೆ ಬಿಗಿ ಬಂದೋಬಸ್ತ್
ಮಹಾ ಶಿವರಾತ್ರಿಯ ದಿನವಾದ, ಕುಂಭಮೇಳ ಸಂಪನ್ನದ ದಿನವೂ ಆಗಿರುವ ಫೆಬ್ರವರಿ 26ರಂದು ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಜನರ ಸುರಕ್ಷತೆ, ಒಂದೇ ಕಡೆ ಹೆಚ್ಚಿನ ಜನ ಸೇರದಂತೆ ನಿಗಾ, ಟ್ರಾಫಿಕ್ ಜಾಮ್ ಆಗದಂತೆ ಕ್ರಮ ತೆಗೆದುಕೊಳ್ಳುವುದು ಸೇರಿ ಸಕಲ ರೀತಿಯಲ್ಲಿ ಸಿದ್ಧತೆ ಮಾಡಲಾಗುತ್ತಿದೆ ಎಂದು ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಭಾನುವಾರ 87 ಲಕ್ಷ ಜನ ಪುಣ್ಯಸ್ನಾನ ಮಾಡಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಮಹಾ ಶಿವರಾತ್ರಿಯ ದಿನದಂದು ಮಹಾ ಕುಂಭಮೇಳವು ಸಂಪನ್ನವಾಗಲಿದೆ. ಅಂದು ಕೋಟ್ಯಂತರ ಜನ ಪುಣ್ಯಸ್ನಾನ ಮಾಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಹಾ ಕುಂಭಮೇಳದಿಂದ ಸುಮಾರು 3 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.