ಬೆಂಗಳೂರು: ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಗೆದ್ದು ಅಧಿಕಾರ ಹಿಡಿದಿದೆ. ಆದರೆ, ಈಗ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗದ ಸ್ಥಿತಿಯಲ್ಲಿ ಸರ್ಕಾರ ಸಿಲುಕಿದೆ. ಹೀಗಾಗಿ ಗ್ಯಾರಂಟಿಗಳಿಗೆ ಕಡಿವಾಣ ಹಾಕಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆಗುತ್ತಿರುವ ಪರಿಸ್ಥಿತಿಗಳ ಕುರಿತು ಹೈಕಮಾಂಡ್ ಗೆ ವಾಸ್ತವದ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದಕ್ಕೆ ನಿರ್ಬಂಧ ಹೇರುತ್ತಾರಾ? ಅಥವಾ ಬಂದ್ ಆಗುತ್ತವೆಯಾ? ಕಾಯ್ದು ನೋಡಬೇಕಿದೆ.
ಈ ವಿಚಾರವಾಗಿ ಮಾತನಾಡಿರುವ ಸತೀಶ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳನ್ನು ಸ್ಥಗಿತರಗೊಳಿಸಬೇಕು ಎಂದು ಹೈಕಮಾಂಡ್‌ಗೆ ತಿಳಿಸಿಲ್ಲ. ಬದಲಾಗಿ ಕೆಲವೊಂದು ಮಿತಿಗಳನ್ನು ಹೇರಬೇಕು ಎಂಬ ಸಲಹೆ ನೀಡಿದ್ದೇನೆ. ಈ ವಿಚಾರವಾಗಿ ನಾನು ಸ್ಪಷ್ಟವಾಗಿದ್ದೇನೆ. ರಾಜ್ಯದಲ್ಲಿ ಗ್ಯಾರಂಟಿ ಬಗ್ಗೆ ಜನರು ಏನು ಮಾತನಾಡುತ್ತಾರೆ ಎಂಬ ಕುರಿತು ಹೇಳಿದ್ದೇನೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದವರಂತೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ ಎಂದು ಎಲ್ಲೂ ಹೇಳಲಿಲ್ಲ. ಪರಿಷ್ಕರಣೆ ಮಾಡುವುದರಿಂದ 10 ಸಾವಿರ ಕೋಟಿ ಉಳಿಯಬಹುದು ಎಂಬುವುದು ಅಭಿಪ್ರಾಯ. ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನದಲ್ಲಿ ಕೊರತೆ ಆಗುತ್ತಿದೆ ಎಬ ವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೂ ಅನುದಾನದ ಕೊರತೆ ಆಗಿಲ್ಲ. ಬಜೆಟ್ ಬುಕ್ ಓದಲಿ, ಸಿದ್ದರಾಮಯ್ಯ ಹೆಚ್ಚು ಅನುದಾನ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರಕ್ಕಿಂತ ಹೆಚ್ಚು ಅನುದಾನವನ್ನು ನಮ್ಮ ಸರ್ಕಾರ ನೀಡಿದೆ ಎಂದು ಹೇಳಿದ್ದಾರೆ.