ಮಂಗಳೂರು: ದ.ಕ ಜಿಲ್ಲೆಯ ಜಪ್ಪಿನಮೊಗರು, ಪಂಪ್‌ವೆಲ್, ಕಂಕನಾಡಿ ಭಾಗದಲ್ಲಿ ಕಾವಿ ಬಟ್ಟೆ ಧರಿಸಿ ಸನ್ಯಾಸಿಗಳಂತೆ ವೇಷ ಧರಿಸಿ ಬರುವ ವ್ಯಕ್ತಿಗಳು ಸ್ಥಳೀಯರನ್ನು ಮರುಳು ಮಾಡಿ ಹಣ ಲಪಟಾಯಿಸಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದಲ್ಲಿ ಎರಡು ಮೂರು ದಿನದಿಂದ ಈ ವ್ಯಕ್ತಿಗಳು ತಿರುಗಾಡುತ್ತಿದ್ದಾರೆ. ಗುಜರಾತ್ ನೋಂದಣಿಯ ಕಾರಿನಲ್ಲಿ ಬರುವ ಇವರು ಅಂಗಡಿ, ಕಚೇರಿಗಳಿಗೆ ತೆರಳಿ ಹಣಕ್ಕೆ ಕೇಳುತ್ತಾರೆ. ಜತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ನಿಲ್ಲಿಸಿ ಆಶೀರ್ವಾದ ಪಡೆಯುವಂತೆ ತಿಳಿಸಿ ಕೈಗೆ ಯಾವುದೋ ಒಂದು ಸುಗಂಧ ದ್ರವ್ಯ ಹಚ್ಚಿ, ಹಣೆಗೆ ವಿಭೂತಿ ಇಟ್ಟು ದಕ್ಷಿಣೆ ಕೇಳುತ್ತಾರೆ. ಕೆಲವರು ಇದರಿಂದ ಮರುಳಾಗಿ ತಮ್ಮ ಜೇಬಿನಲ್ಲಿದ್ದ ಹಣವನ್ನು ಅವರಿಗೆ ನೀಡಿ ಬಳಿಕ ಪಶ್ಚಾತ್ತಾಪ ಪಟ್ಟಿದ್ದಾರೆ. ಇಂಥವರ ಬಗ್ಗೆ ಜಾಗೃತರಾಗಿರುವಂತೆ ಪೊಲೀಸರು ತಿಳಿಸಿದ್ದಾರೆ.



















