ಮಂಡ್ಯ: ಜನರ ತೆರಿಗೆ ದುಡ್ಡಿನಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ಬೆಳಗಾವಿಯಲ್ಲಿ ನಡೆಯುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಗಳಿಸಿದ ಮೇಲೆ ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಎಂದು ಸ್ವತಃ ಮಹಾತ್ಮ ಗಾಂಧೀಜಿ ಹೇಳಿದ್ದರು. ಈಗಿರುವುದು ಅವರ ಕಾಂಗ್ರೆಸ್ ಅಲ್ಲ. ಆಲಿಬಾಬ ಮತ್ತು 40 ಮಂದಿ ಕಳ್ಳರ ಕಾಂಗ್ರೆಸ್ ಇದು. ಗಾಂಧೀಜಿ ಅವರ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಸಂಘಟಿತ ಹೋರಾಟದ ಮೂಲಕ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟರು ಗಾಂಧೀಜಿ. ಆದರೆ, ಗಾಂಧೀಜಿ ಅವರ ರಾಮರಾಜ್ಯದ ಪರಿಕಲ್ಪನೆ ಇವತ್ತು ರಾಜ್ಯದಲ್ಲಿ ಸಾಕಾರ ಆಗಿದೆಯಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನರ ದುಡ್ಡಿನಲ್ಲಿ ಕೋಟ್ಯಾಂತರ ರೂ. ವೆಚ್ಚ ಮಾಡಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಆದರೆ, ಕಾರ್ಯಕ್ರಮದ ಕಟೌಟ್ ಗಳಲ್ಲಿ ಮಾತ್ರ ಗಾಂಧಿ ಫೋಟೋ ಇಲ್ಲ. ನಕಲಿ ಗಾಂಧಿಗಳ ಫೋಟೋಗಳು ಇರುವ ಕಟೌಟ್ ಗಳನ್ನು ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ದಯನೀಯವಾಗಿದೆ. ಗುಣಮಟ್ಟದ ಚಿಕಿತ್ಸೆ ದೊರೆಯದೆ ಬಾಣಂತಿಯರು, ಮಕ್ಕಳ ಸರಣಿ ಸಾವುಗಳು ಸಂಭವಿಸುತ್ತಿವೆ. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ಗಳಿಲ್ಲ. 2.756 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಿದ್ದರೂ ಜನರ ದುಡ್ಡಲ್ಲಿ ಈ ರೀತಿ ಕಾರ್ಯಕ್ರಮ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.