ಪ್ರವಾಹ ಪರಿಸ್ಥಿತಿ ತಡೆಯಲು ವಿಫಲರಾಗಿರುವ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಇದೇನಪ್ಪ! ಇಷ್ಟೊಂದು ಕಠಿಣ ನಿರ್ಧಾರ? ಎಂದು ಶಾಕ್ ಆದ್ರಾ? ಇದು ನಮ್ಮ ದೇಶದ ಕತೆಯಲ್ಲ. ಉತ್ತರ ಕೊರಿಯಾ ಕತೆ.
ಅಲ್ಲಿನ ಸರ್ವಾಧಿಕಾರಿಯ ಕಠಿಣ ಶಿಕ್ಷೆ ಇದು. ಅಧ್ಯಕ್ಷ ಕಿಮ್ ಜಾಂಗ್ ಉನ್ ವಿಚಿತ್ರ ಕಾನೂನುಗಳನ್ನು ಪರಿಚಯಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ಗಲ್ಲು ಶಿಕ್ಷೆಯ ಸುದ್ದಿಯಲ್ಲಿದ್ದಾರೆ.
ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಆಡಳಿತವಿದ್ದು, ಸರ್ಕಾರ ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳನ್ನು ಇಲ್ಲಿನ ನಾಗರಿಕರು ಪಾಲಿಸಲೇಬೇಕಾಗುತ್ತದೆ.
ಇಲ್ಲದಿದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಂಡಿತ. ಆ ದೇಶದಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಪರಿಣಾಮ ಸಾಕಷ್ಟು ಸಾವು- ನೋವುಗಳು ಸಂಭವಿಸಿದ್ದವು. ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉಂಟಾದ ಸ್ಥಿತಿ ಎಂದು ಕೋಪಗೊಂಡಿರುವ ಕಿಮ್ ಜಂಗ್ ಉನ್ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಉತ್ತರ ಕೊರಿಯಾದಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಭೂ ಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಭೀಕರ ಪ್ರವಾಹದಲ್ಲಿ 4 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಕಿಮ್ ಜಾಂಗ್ ಉನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಅಧಿಕಾರಿ ತೋರಿದ ನಿರ್ಲಕ್ಷ್ಯದ ಕಾರಣಕ್ಕೆ 30 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪ ಹೊರಿಸಿ. ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ಹೇಳಿವೆ.