ಅಂಕಾರ/ವಾಷಿಂಗ್ಟನ್ : ಟರ್ಕಿ ವಾಯುಪಡೆಗೆ ಸೇರಿದ, ಅಮೆರಿಕ ನಿರ್ಮಿತ F-16 ಯುದ್ಧವಿಮಾನ ಪತನಗೊಂಡು ಓರ್ವ ಪೈಲಟ್ ಸಾವನ್ನಪ್ಪಿರುವ ಘಟನೆ ಟರ್ಕಿಯ ಬಲಿಕೇಸಿರ್ ನಗರದಲ್ಲಿ ನಡೆದಿದೆ.
ಬಲಿಕೇಸಿರ್ ನಗರದ ಬುರ್ಸಾ-ಇಜ್ಮಿರ್ ಹೆದ್ದಾರಿಯ ಬಳಿ ಘಟನೆ ಸಂಭವಿಸಿದೆ. ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಆಂಬುಲೆನ್ಸ್‌ಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿವೆ.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಮಾನದ ಅವಶೇಷಗಳು ರಸ್ತೆಯಲ್ಲಿ ಚದುರಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆ ಬಳಿಕ ಟರ್ಕೀಶ್ ಗವರ್ನರ್ ಇಸ್ಮಾಯಿಲ್ ಉಸ್ತಾವೋಗ್ಲು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಲಿಕೇಸಿರ್ 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ನ ಸ್ಕ್ವಾಡ್ರನ್‌ಗೆ ಸೇರಿದ್ದ ನಮ್ಮ F-16 ವಿಮಾನ ಪತನಗೊಂಡಿದೆ. ನಸುಕಿನ 12:50ರ ಸುಮಾರಿಗೆ ಮಿಷನ್ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದೆ.ನಮ್ಮ ಓರ್ವ ಪೈಲಟ್ ಕೂಡ ಹುತಾತ್ಮರಾಗಿದ್ದಾರೆ. ನಮ್ಮ ಹುತಾತ್ಮರ ಮೇಲೆ ಕರುಣೆ ತೋರಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
F-16 ಅಪಘಾತಗಳು ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ನಡೆದಿವೆ. 2015ರಿಂದ 2024ರವರೆಗೆ ತರಬೇತಿ ಹಾರಾಟದ ಸಮಯದಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಕಂಡುಬಂದಿವೆ. 2019ರಲ್ಲಿ ಇಸ್ಲಾಮಾಬಾದ್ ಬಳಿ ಪೆರೇಡ್ ಅಭ್ಯಾಸದ ಸಮಯದಲ್ಲಿ F-16 ಪತನಗೊಂಡು ಪೈಲಟ್ ಸಾವನ್ನಪ್ಪಿದ್ದರು. 2015ರಲ್ಲಿ ಸ್ಪೇನ್‌ನ ಅಲ್ಬಾಸೆಟ್ ವಾಯುನೆಲೆಯಲ್ಲಿ ಗ್ರೀಕ್ F-16 ಅಪಘಾತಕ್ಕೀಡಾಗಿ ಹಲವರು ಸಾವನ್ನಪ್ಪಿದ್ದರು. 2023ರಲ್ಲಿ ಅಯೋನಿಯನ್ ಸಮುದ್ರದಲ್ಲಿ F-16 ಪತನಗೊಂಡು ಪೈಲಟ್ ಎಂದಿಗೂ ಪತ್ತೆಯಾಗಲಿಲ್ಲ. 2022-2024ರ ನಡುವೆ ದಕ್ಷಿಣ ಕೊರಿಯಾದಲ್ಲಿ ತರಬೇತಿಯ ಸಮಯದಲ್ಲಿ ಪ್ರತ್ಯೇಕ F-16 ಅಪಘಾತಗಳು ನಡೆದಿವೆ.
ಇದನ್ನೂ ಓದಿ : ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದವನ ಬಂಧನ



















