ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗತ್ತಿದ್ದು, ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ.
ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಾಗಿದೆ. ದೂದಗಂಗಾ, ವೇದಗಂಗಾ ಹೀರಣ್ಯಕೇಶಿ ನದಿ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಏಳು ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ದೂದಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿರುವ ಸೇತುವೆಗಳು ನೀರಿನಿಂದ ಜಲಾವೃತಗೊಂಡಿವೆ.
ದೂದಗಂಗಾ ನದಿಯ ಮಲ್ಲಿಕವಾಡ-ದತ್ತವಾಡ, ಭೋಜ-ಕಾರದಗಾ ಗ್ರಾಮಗಳ ಸಂಪರ್ಕ ಸೇತುವೆ, ವೇದಗಂಗಾ ನದಿಯ ಭಾರವಾಡ-ಕುನ್ನೂರು, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು-ಕಲ್ಲೋಳ, ಭಾವನಸೌಂದತ್ತಿ-ಮಾಂಜರಿ ಸೇತುವೆಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರ ನಡೆಸುತ್ತಿದ್ದಾರೆ.