ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿ ಆದೇಶ ಹೊರಡಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ (ಸೆಪ್ಟೆಂಬರ್ 9) ಮುಕ್ತಾಯವಾಗುತ್ತಿತ್ತು. ಹೀಗಾಗಿ ಅವರನ್ನು ಪೊಲೀಸರು ಕೋರ್ಟ್ ಎದುರು ಹಾಜರು ಪಡಿಸಿದ್ದರು. ಈ ವೇಳೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರ ವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.
ದರ್ಶನ್ ಅವರು ಬಳ್ಳಾರಿ ಜೈಲಿನಿಂದ, ಪವಿತ್ರಾ ಗೌಡ ಬೆಂಗಳೂರು ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಅದೇ ರೀತಿ ಈ ಪ್ರಕರಣದಲ್ಲಿ ಬೇರೆ ಬೇರೆ ಜೈಲು ಸೇರಿರುವ ಎಲ್ಲರೂ ವಿಚಾರಣೆ ಎದುರಿಸಿದರು. ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರ ವರೆಗೆ ವಿಸ್ತರಿಸಲಾಯಿತು.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಹಾಜರಾದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಪ್ರಕರಣದ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದರು. ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ಸಾಕ್ಷ್ಯಾಧಾರಗಳನ್ನು ಸಲ್ಲಿಸಿದರು.
ನಟ ದರ್ಶನ್ ಆಂಡ್ ಕಿಲ್ಲರ್ ಗ್ಯಾಂಗ್ ಜೈಲು ಸೇರಿ ಮೂರು ತಿಂಗಳು ಕಳೆಯುತ್ತಿವೆ. ಜೂನ್ 11ರಂದು ಪ್ರಕರಣದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 17 ಜನರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ದರ್ಶನ್ ಆಂಡ್ ಗ್ಯಾಂಗ್ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈಗಾಗಲೇ ಜಾಮೀನು ಅರ್ಜಿಗೆ ದರ್ಶನ್ ಅವರಿಂದ ಸಹಿ ಪಡೆದಿದ್ದಾರೆ. ಆದರೆ, ಯಾವಾಗ ಸಲ್ಲಿಕೆ ಮಾಡುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.