ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಮತ್ತೆ ವಿಸ್ತರಿಸಿದೆ.
ದರ್ಶನ್ ಆಂಡ್ ಗ್ಯಾಂಗ್ ಬಂಧನದ ಅವಧಿ ಇಂದು ಕೊನೆಗೊಂಡ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು 24ನೇ ಎಸಿಎಂಎಂ ಇನ್ಚಾರ್ಜ್ ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು. ಪೊಲೀಸರ ರಿಮ್ಯಾಂಡ್ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್, ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿತು.
ಬೆಂಗಳೂರು ಜೈಲಿನಲ್ಲಿರುವ ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದರು.
ದರ್ಶನ್ ಹಾಗೂ ಸಂಗಡಿಗರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ ಮೂವರು ತುಮಕೂರು ಜೈಲಿನಲ್ಲಿದ್ದಾರೆ. ಈ ಮೂವರು ಆರೋಪಿಗಳು ಅಪ್ರೂವರ್ ಗಳಾಗಿ ಬದಲಾಗಿದ್ದು ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ದರ್ಶನ್, ಪವಿತ್ರಾ ಗೌಡ ಹಾಗೂ ಇತರರ ಪಾತ್ರದ ಬಗ್ಗೆಯೂ ವಿವರವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇನ್ನಿತರ ಆರೋಪಿಗಳಿಂದ ಇವರನ್ನು ದೂರ ಇರಿಸಲಾಗಿದೆ. ಹೀಗಾಗಿ ಇನ್ನೂ ಹಲವು ದಿನ ದರ್ಶನ್ ಆಂಡ್ ಗ್ಯಾಂಗ್ ಜೈಲಿನಲ್ಲಿಯೇ ಇರಬೇಕಾದ ಸ್ಥಿತಿಯಲ್ಲಿದೆ. ಸದ್ಯದ ಸ್ಥಿತಿ ನೋಡಿದರೆ ದರ್ಶನ್ ಗೆ ಇನ್ನೂ ಹಲವು ತಿಂಗಳುಗಳ ಕಾಲ ಜಾಮೀನು ಸಿಗುವುದು ಡೌಟ್ ಎನ್ನಲಾಗುತ್ತಿದೆ.