ಬೆಂಗಳೂರು: ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸ್ಪೋಟಕ ಪತ್ತೆಯಾದ ಪ್ರಕರಣ ಈಗ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಗ್ರೆನೇಡ್ ಸಿಕ್ಕಿದ್ದ ಜಾಗಕ್ಕಿಂತಲೂ ಸಿಕ್ಕಿದ್ದ ಜಾಗದಿಂದ ಪೊಲೀಸರಿಗೆ ಆತಂಕ ಶುರುವಾಗಿದೆ. ಪ್ಯಾಲೆಸ್ ಗ್ರೌಂಡ್ ನಲ್ಲಿ ಬ್ಲಾಸ್ಟ್ ಮಾಡಲು ಪ್ಲ್ಯಾನ್ ನಡೆದಿತ್ತಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ವಿಐಪಿ, ವಿವಿಐಪಿಗಳ ಕಾರ್ಯಕ್ರಮಗಳು ನಡೆಯುವ ಜಾಗದಲ್ಲಿ ಸ್ಫೋಟಿಸುವ ಸಂಚು ಕೂಡ ನಡೆದಿತ್ತು ಎಂಬ ಶಂಕೆ ಈಗ ಪೊಲೀಸರಿಗೆ ಮೂಡಿದೆ.
ಕಳೆದ 20ರಂದು ಸಂಪಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗ್ರೆನೇಡ್ ಪತ್ತೆಯಾಗಿತ್ತು. ಬಾಲ್ ರೀತಿಯಲ್ಲಿ ಇರುವ ಗ್ರೆನೇಡ್ ನ್ನು ಆರೋಪಿ ಅಬ್ದುಲ್ ರೆಹಮಾನ್ ಇಟ್ಟುಕೊಂಡಿದ್ದ. ತನಿಖೆ ವೇಳೆ ಅಬ್ದುಲ್ ರೆಹಮಾನ್ ಗೆ ಕಸದಲ್ಲಿ ಸಿಕ್ಕ ಗ್ರೆನೇಡ್ ಎಂಬ ವಿಚಾರ ಬಯಲಾಗಿತ್ತು. ಆರೋಪಿಯು ಪ್ಯಾಲೆಸ್ ಗ್ರೌಂಡ್ ನಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಚಿಂದಿ ಆಯುವಾಗ ಬಾಲ್ ರೀತಿಯ ಗ್ರೆನೇಡ್ ಸಿಕ್ಕಿದ್ದರಿಂದ ತೆಗೆದುಕೊಂಡಿದ್ದ. ಆದರೆ, ಇದು ಅಲ್ಲಿಯವರೆಗೆ ಹೇಗೆ ಹೋಯಿತು ಎಂಬುವುದು ಮಾತ್ರ ಪೊಲೀಸರ ಟೆನ್ಶನ್ ಗೆ ಕಾರಣವಾಗಿದೆ.
ಬಾಂಬ್ ಗೆ ಬಳಸುವ ಕೆಮಿಕಲ್ಸ್ ನ ತುಂಬಿದ್ದ ಗ್ರೆನೇಡ್ ಬಾಲ್ ತಂದಿಟ್ಟ ಉದ್ದೇಶ ಏನು? ವಿಐಪಿ, ವಿವಿಐಪಿಗಳ ಕಾರ್ಯಕ್ರಮಗಳನ್ನು ಟಾರ್ಗೆಟ್ ಮಾಡಿ ತಂದಿಟ್ಟಿದ್ರಾ? ಈ ವಿಚಾರಗಳ ಬಗ್ಗೆ ಪೊಲೀಸರಿಗೆ ಹೊಸ ಆತಂಕ ಶುರುವಾಗಿದೆ. ಹೀಗಾಗಿ ಗ್ರೆನೇಡ್ ಸ್ಪೊಟಕದ ಮೂಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಆರೋಪಿಯ ಕಸ್ಟಡಿ ನಿನ್ನೆಗೆ ಅಂತ್ಯವಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಕುರಿತು ಸಂಪಿಗೆಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.