ಬೆಂಗಳೂರು: ಮೈಸೂರು ದಸರಾಗೆ ಅದ್ಧೂರಿಯಾಗಿಯೇ ಚಾಲನೆ ನೀಡಲಾಗಿದೆ. ಶಾಲಾ ಮಕ್ಕಳಿಗೆ 18 ದಿನಗಳ ರಜೆಯನ್ನೂ ಘೋಷಿಸಲಾಗಿದೆ. ಇದರ ಬೆನ್ನಲ್ಲೇ, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕೆಎಸ್ ಆರ್ ಟಿಸಿಯು ವಿಶೇಷ ಪ್ರವಾಸದ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇನ್ನೇಕೆ ತಡ, ದಸರಾ ರಜೆಯನ್ನು ಪ್ರವಾಸದ ಮೂಲಕ ಕಳೆಯಬಹುದಾಗಿದೆ. ಟೂರ್ ಪ್ಯಾಕೇಜ್ ನ ದರ ಪಟ್ಟಿ ಇಲ್ಲಿದೆ.
ಜಲದರ್ಶಿನಿ ಪ್ಯಾಕೇಜ್
ಜಲಪಾತಗಳು ಮತ್ತು ಜಲಾಶಯಗಳ ಸೊಬಗನ್ನು ಈ ಪ್ಯಾಕೇಜ್ ಮೂಲಕ ಅನುಭವಿಸಬಹುದು. ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ (ನಂಜುಂಡೇಶ್ವರ ದೇವಸ್ಥಾನ), ದುಬಾರೆ ಫಾರೆಸ್ಟ್ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. ಆಣೆಕಟ್ಟುಗಳನ್ನು ವೀಕ್ಷಿಸಬಹುದಾಗಿದೆ. ಮಕ್ಕಳಿಗೆ 350 ರೂ. ಟಿಕೆಟ್ ದರವಿದ್ದರೆ, ವಯಸ್ಕರಿಗೆ 500 ರೂ. ಇದೆ.
ದೇವದರ್ಶಿನಿ ಪ್ಯಾಕೇಜ್
ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಈ ಪ್ಯಾಕೇಜ್ ಉತ್ತಮವಾಗಿದೆ. ನಂಜನಗೂಡು, ಮುಡುಕುತೊರೆ ಬಸದಿ, ತಲಕಾಡು, ಸೋಮನಾಥಪುರ ಮತ್ತು ಶ್ರೀರಂಗಪಟ್ಟಣದಂತಹ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಮಕ್ಕಳಿಗೆ 225 ರೂ. ಟಿಕೆಟ್ ದರವಿದ್ದರೆ, ವಯಸ್ಕರಿಗೆ 330 ರೂ. ಇದೆ.
ಗಿರಿದರ್ಶಿನಿ ಪ್ಯಾಕೇಜ್
ಗಿರಿದರ್ಶಿನಿ ಪ್ಯಾಕೇಜ್ ನಲ್ಲಿ ಬೆಟ್ಟ-ಗುಡ್ಡಗಳು ಮತ್ತು ಅರಣ್ಯ ಪ್ರದೇಶಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಇದರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಮೈಸೂರಿನ ಚಾಮುಂಡಿ ಬೆಟ್ಟಗಳನ್ನು ನೋಡಬಹುದು. ಮಕ್ಕಳಿಗೆ 300 ರೂ. ಟಿಕೆಟ್ ದರವಿದ್ದರೆ, ವಯಸ್ಕರಿಗೆ 450 ರೂ. ಇದೆ.
ಪ್ರವಾಸಿಗರು ಇನ್ನೊಂದು ವಿಷಯವನ್ನು ಗಮನಿಸಬೇಕು. ವಿಶೇಷ ಟೂರ್ ಪ್ಯಾಕೇಜ್ ಗಳ ಬಸ್ ಗಳು ಮೈಸೂರು ನಗರದಿಂದ ಪ್ರಾರಂಭವಾಗಿ, ದಿನಪೂರ್ತಿ ನಿಗದಿತ ಸ್ಥಳಗಳಿಗೆ ಭೇಟಿ ತೆರಳುತ್ತವೆ. ಎಲ್ಲ ಸ್ಥಳಗಳನ್ನು ವೀಕ್ಷಣೆ ಮಾಡಿದ ಬಳಿಕ ಸಂಜೆ ಮೈಸೂರಿಗೆ ಹಿಂದಿರುಗುತ್ತವೆ. ಆಸಕ್ತಿ ಇರುವವರು ಕೆ ಎಸ್ ಆರ್ ಟಿ ಸಿಯ ಅಧಿಕೃತ ವೆಬ್ ಸೈಟ್ ksrtc.in ಗೆ ಭೇಟಿ ನೀಡಬೇಕು. ಮೈಸೂರು ಸೇರಿ ವಿವಿಧ ನಗರಗಳಲ್ಲಿರುವ ಕೆ ಎಸ್ ಆರ್ ಟಿ ಸಿ ಬುಕ್ಕಿಂಗ್ ಕೌಂಟರ್ ಗಳ ಮೂಲಕ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಬಹುದು.