ಬೆಂಗಳೂರು: ರಾಜ್ಯ ಸರ್ಕಾರದ ಆರ್ಥಿಕತೆಗೆ ಕಿಕ್ ನೀಡಬೇಕಿದ್ದ ಅಬಕಾರಿ ರಾಜಸ್ವ ಮತ್ತೊಮ್ಮೆ ಶಾಕ್ ಕೊಟ್ಟಿದೆ. ಹೌದು! ದರ ಏರಿಕೆ ಪರಿಣಾಮವೋ ಇಲ್ಲಾ, ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದನ್ನ ಜನ ಗಂಭೀರವಾಗಿ ಪರಿಗಣಿಸಿದಾರೋ ಗೊತ್ತಿಲ್ಲ. ಆದರೆ, ಈ ಬಾರಿ ಬಜೆಟ್ ನಲ್ಲಿ ಘೋಷಿಸಿದ್ದ ಅಬಕಾರಿ ರಾಜಸ್ವ ನಿರೀಕ್ಷಿತ ಗುರಿಯನ್ನು ತಲುಪುವಲ್ಲಿ ಮತ್ತೊಮ್ಮೆ ವಿಫಲವಾಗಿದೆ.
ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಈ ಬಾರಿ 38, 525 ಕೋಟಿ ರಾಜಸ್ವ ನಿರೀಕ್ಷೆಯ ಗುರಿ ನಿಗದಿ ಮಾಡಿದ್ರು. ಆದ್ರೆ, 35530 ಕೋಟಿ ಮಾತ್ರ ಸಂಗ್ರಹ ಮಾಡಲಾಗಿದೆ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ 2995 ಕೋಟಿ ರಾಜಸ್ವ ಕೊರತೆಯಾಗಿದೆ. ಹಾಗೆ ನೋಡಿದರೆ ರಾಜಸ್ವ ಖೋತಾ ಸರಣಿ ಇದೇ ಮೊದಲಲ್ಲ. 2023-24ನೇ ಸಾಲಿನಲ್ಲೂ ಅಬಕಾರಿ ಇಲಾಖೆಗೆ ಕೊಟ್ಟ ಟಾರ್ಗೆಟ್ ರೀಚ್ ಆಗಿರಲಿಲ್ಲ. ಆ ಸಾಲಿನಲ್ಲೂ 2 ಸಾವಿರ ಕೋಟಿಗಳ ಖೋತಾ ಅನುಭವಿಸಲಾಗಿತ್ತು.
ಹಾಗೆ ನೋಡಿದರೆ, 23-24ನೇ ಸಾಲಿಗಿಂತ, 24-25ರ ಆರ್ಥಿಕ ವರ್ಷದಲ್ಲಿ ಮಧ್ಯ ಮಾರಾಟದಲ್ಲಿ ಏರಿಕೆಯಾಗಿದೆ. ಆದರೂ ನಿರೀಕ್ಷಿತ ಗುರಿ ತಲುಪಲು ಮಾತ್ರ ಸಾಧ್ಯವಾಗಿಲ್ಲ. ಅಕ್ಟೋಬರ್ ವರೆಗೂ ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಿತ್ತು. ಈ ಪ್ರಮಾಣ ಕಳೆದ ಮಾರ್ಚ್ ವೇಳೆಗೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಮಧ್ಯ ಪ್ರಿಯರು ಕಿಕ್ ನಂಟು ಬಿಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.



















