ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯದಲ್ಲಿ ಭಾರತದ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ವೆಸ್ಟ್ ಇಂಡೀಸ್ ತಂಡದ ಪ್ರದರ್ಶನದ ಬಗ್ಗೆ ಭಾರತದ ಮಾಜಿ ವಿಶ್ವಕಪ್ ವಿಜೇತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಡನ್ ಗಾರ್ಡನ್ನಲ್ಲಿ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ವಿಂಡೀಸ್ ನಾಯಕ ಶಾಯ್ ಹೋಪ್ ಅವರ ಮಂದಗತಿಯ ಬ್ಯಾಟಿಂಗ್ ಮತ್ತು ಕಳಪೆ ನಾಯಕತ್ವವೇ ತಂಡದ ಸೋಲಿಗೆ ನೇರ ಕಾರಣ ಎಂದು ಶ್ರೀಕಾಂತ್ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ತಂಡದ ಸೋಲಿಗೆ ಹೋಪ್ ಅವರ ಜವಾಬ್ದಾರಿರಹಿತ ಆಟವೇ ಕಾರಣ
ಸಂಪೂರ್ಣವಾಗಿ ಬ್ಯಾಟಿಂಗ್ಗೆ ಪೂರಕವಾಗಿದ್ದ ಪಿಚ್ನಲ್ಲಿ ದೊಡ್ಡ ಮೊತ್ತ ದಾಖಲಿಸುವ ಅವಕಾಶವಿದ್ದರೂ, ಶಾಯ್ ಹೋಪ್ ಅತಿಯಾದ ಎಸೆತಗಳನ್ನು ವ್ಯರ್ಥ ಮಾಡಿದರು ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ. ಈ ಪಂದ್ಯದಲ್ಲಿ ಹೋಪ್ 33 ಎಸೆತಗಳನ್ನು ಎದುರಿಸಿ ಕೇವಲ 32 ರನ್ ಗಳಿಸಿದರು. ಅವರ ಈ ಆಮೆಗತಿಯ ಬ್ಯಾಟಿಂಗ್ನಿಂದಾಗಿ ವಿಂಡೀಸ್ ತಂಡಕ್ಕೆ 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ರೊಸ್ಟನ್ ಚೇಸ್, ರೋವ್ಮನ್ ಪೊವೆಲ್ ಮತ್ತು ಜೇಸನ್ ಹೋಲ್ಡರ್ ಅಬ್ಬರಿಸಿದರೂ, ನಾಯಕನ ಮಂದಗತಿಯ ಆಟವು ತಂಡದ ಒಟ್ಟಾರೆ ಮೊತ್ತದ ಮೇಲೆ ಗಂಭೀರ ಪರಿಣಾಮ ಬೀರಿತು. ಅಂತಿಮವಾಗಿ ಸಂಜು ಸ್ಯಾಮ್ಸನ್ ಅವರ ಅಜೇಯ 97 ರನ್ಗಳ ನೆರವಿನಿಂದ ಭಾರತ ಈ ಗುರಿಯನ್ನು ಸುಲಭವಾಗಿ ತಲುಪಿತು.
ಸೋಲಿನ ಹೊಣೆ ಹೊರದ ನಾಯಕನ ವಿರುದ್ಧ ಶ್ರೀಕಾಂತ್ ಕಿಡಿ
ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಶಾಯ್ ಹೋಪ್ ನೀಡಿದ ಹೇಳಿಕೆಗಳು ಶ್ರೀಕಾಂತ್ ಅವರ ಕೆಂಗಣ್ಣಿಗೆ ಗುರಿಯಾಗಿವೆ. ಸೋಲಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಹೋಪ್ ಸಿಟ್ಟಿನಿಂದ ಉತ್ತರಿಸಿದ್ದಲ್ಲದೆ, “ಜನರಿಗೆ ಸಂತೋಷವಾಗುವುದಾದರೆ ಈ ಸೋಲಿನ ಎಲ್ಲ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ವ್ಯಂಗ್ಯವಾಗಿ ಹೇಳಿದ್ದರು. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಶ್ರೀಕಾಂತ್, “ಶಾಯ್ ಹೋಪ್ ಯಾವಾಗಲೂ ತನಗಾಗಿ ಆಡುತ್ತಾರೆ. ಪಂದ್ಯದ ನಂತರ ಅವರು ಪೊವೆಲ್ ಮತ್ತು ಹೋಲ್ಡರ್ ಮೇಲೆ ಸೋಲಿನ ಗೂಬೆ ಕೂರಿಸಲು ಪ್ರಯತ್ನಿಸಿದರು. ಆದರೆ ವಾಸ್ತವದಲ್ಲಿ ಅವರ ಬ್ಯಾಟಿಂಗ್ನಿಂದಲೇ ವೆಸ್ಟ್ ಇಂಡೀಸ್ ತಂಡ ಸೋತಿದೆ. ನಿಮ್ಮನ್ನು ನಾಯಕನನ್ನಾಗಿ ಮಾಡಿದ್ದೇ ದೊಡ್ಡ ತಪ್ಪು” ಎಂದು ಗುಡುಗಿದ್ದಾರೆ.
ನಾಯಕತ್ವದ ನಿರ್ಧಾರಗಳು ಮತ್ತು ತಾಂತ್ರಿಕ ತಪ್ಪುಗಳು
ಬ್ಯಾಟಿಂಗ್ ಮಾತ್ರವಲ್ಲದೆ ಶಾಯ್ ಹೋಪ್ ಅವರ ನಾಯಕತ್ವದ ನಿರ್ಧಾರಗಳನ್ನೂ ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ. ಪಿಚ್ನಲ್ಲಿ ಸ್ಪಿನ್ನರ್ಗಳಿಗೆ ಸ್ವಲ್ಪ ನೆರವು ಸಿಗುತ್ತಿದ್ದರೂ ಸಹ, ಹೋಪ್ ತಮ್ಮ ಮೂವರು ಸ್ಪಿನ್ನರ್ಗಳನ್ನು ಕೇವಲ ಆರು ಓವರ್ಗಳಿಗೆ ಮಾತ್ರ ಬಳಸಿಕೊಂಡಿದ್ದನ್ನು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಅಬ್ಬರದ ಬ್ಯಾಟಿಂಗ್ ನಡೆಸಬಲ್ಲ ರೊಮಾರಿಯೋ ಶೆಫರ್ಡ್ ಅವರನ್ನು ಆರಂಭಿಕರನ್ನಾಗಿ ಕಳುಹಿಸುವ ಬದಲು ಹೋಪ್ ತಾವೇ ಕ್ರೀಸ್ಗೆ ಇಳಿದಿದ್ದು ದೊಡ್ಡ ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಹೋಪ್ ಆಡುವ ಹನ್ನೊಂದರ ಬಳಗದಲ್ಲಿ ಇರುವುದೇ ವೇಸ್ಟ್, ಅವರು ಕೇವಲ ಹೊರಗಡೆ ಕುಳಿತು ನಿರ್ದೇಶನ ನೀಡುವ ನಾಯಕನಾಗಿದ್ದರೆ ಸಾಕಿತ್ತು” ಎಂದು ಶ್ರೀಕಾಂತ್ ಲೇವಡಿ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಬೆಂಬಲ
ಶ್ರೀಕಾಂತ್ ಅವರಂತಹ ಮಾಜಿ ಆಟಗಾರರು ಟೀಕೆಗಳ ಸುರಿಮಳೆಗರೆಯುತ್ತಿದ್ದರೆ, ಇತ್ತ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ (CWI) ಅಧ್ಯಕ್ಷ ಕಿಶೋರ್ ಶಾಲೋ ಮಾತ್ರ ತಂಡದ ಬೆನ್ನಿಗೆ ನಿಂತಿದ್ದಾರೆ. ಈ ವಿಶ್ವಕಪ್ನಲ್ಲಿ ವಿಂಡೀಸ್ ತಂಡ ತೋರಿದ ಹೋರಾಟದ ಗುಣವನ್ನು ಅವರು ಶ್ಲಾಘಿಸಿದ್ದಾರೆ. ತಂಡವು ಸೂಪರ್ 8 ಹಂತದವರೆಗೆ ತಲುಪಿದ್ದು ಕೆರಿಬಿಯನ್ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ತಂಡದಲ್ಲಿ ಕಂಡುಬಂದ ಒಗ್ಗಟ್ಟು ಮತ್ತು ಆಟಗಾರರ ಬದ್ಧತೆಯು ವೆಸ್ಟ್ ಇಂಡೀಸ್ ಕ್ರಿಕೆಟ್ನ ಘನತೆಯನ್ನು ಮತ್ತೆ ಎತ್ತಿ ಹಿಡಿಯುವ ಮುನ್ಸೂಚನೆಯಾಗಿದೆ ಎಂದು ಅಧ್ಯಕ್ಷರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಬುಮ್ರಾ ಒಬ್ಬ ಅದ್ಭುತ ‘ಬೌಲಿಂಗ್ ಮಷೀನ್’ | ಜಸ್ಪ್ರೀತ್ ವೇಗಕ್ಕೆ ಮೈಕಲ್ ವಾನ್ ಫಿದಾ


















