ಉತ್ತರಾಖಂಡ: 2022ರಲ್ಲಿ ನಡೆದ 19 ವರ್ಷದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಉತ್ತರಾಖಂಡದ ಕೋಟದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶುಕ್ರವಾರ,ಮೂವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಮಾಜಿ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಹಾಗೂ ಇತರ ಇಬ್ಬರು ಆರೋಪಿಗಳಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಅಪರಾಧಿಗಳು.
ಪ್ರಕರಣದ ಮುಖ್ಯ ಆರೋಪಿ, ಈಗ ಅಮಾನತುಗೊಂಡಿರುವ ಬಿಜೆಪಿ ನಾಯಕ ವಿನೋದ್ ಆರ್ಯನ ಪುತ್ರನಾದ ಪುಲ್ಕಿತ್ ಆರ್ಯ, ಅಂಕಿತಾ ಭಂಡಾರಿಗೆ ರೆಸಾರ್ಟ್‌ನ ಗ್ರಾಹಕರಿಗೆ ‘ವಿಶೇಷ ಸೇವೆ’ ನೀಡುವಂತೆ ಒತ್ತಾಯಿಸಿದ್ದ ಆರೋಪವಿದೆ.
ಏನಿದು ಘಟನೆ?
ಪೌರಿ ಜಿಲ್ಲೆಯ ಯಮಕೇಶ್ವರ್ ಪ್ರದೇಶದಲ್ಲಿ ಪುಲ್ಕಿತ್ ಆರ್ಯನಿಗೆ ಸೇರಿದ ‘ವನಂತರ ರೆಸಾರ್ಟ್’ನಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಸೆಪ್ಟೆಂಬರ್ 18ರಂದು ಕಾಣೆಯಾಗಿದ್ದರು. ಕೆಲವು ದಿನಗಳ ನಂತರ, ಆಕೆಯ ಮೃತದೇಹ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು. ಈ ಘಟನೆಯು ಮಹಿಳೆಯರ ಸುರಕ್ಷತೆ, ರಾಜಕೀಯ ಪ್ರಭಾವ ಮತ್ತು ನ್ಯಾಯ ವಿತರಣೆಯ ಕುರಿತು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಆರಂಭಿಕ ತನಿಖೆಯಲ್ಲಿ ಲೋಪದೋಷಗಳು ಮತ್ತು ಆರೋಪಿಗಳಿಗೆ ರಾಜಕೀಯ ರಕ್ಷಣೆಯ ಆರೋಪಗಳು ಕೇಳಿ ಬಂದಿದ್ದವು.
ಬಳಿಕ ತನಿಖೆ ನಡೆಸಿದಿ ವಿಶೇಷ ತನಿಖಾ ತಂಡ (SIT) ಈ ಪ್ರಕರಣದಲ್ಲಿ 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದರಲ್ಲಿ 97 ಸಾಕ್ಷಿಗಳನ್ನು ಗುರುತಿಸಲಾಗಿತ್ತು, ಅದರಲ್ಲಿ 47 ಜನರು ಮಾರ್ಚ್ 28ರಂದು ಆರಂಭವಾದ ವಿಚಾರಣೆಯ ಅಂತಿಮ ತೀರ್ಪು ಇದೀಗ ಪ್ರಕಟಗೊಂಡಿದೆ.
ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರು ಆರೋಪಿಗಳಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಅವರ ಮೇಲೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 302 (ಕೊಲೆ), 201 (ಪುರಾವೆಗಳನ್ನು ನಾಶಪಡಿಸುವುದು), 354A (ಲೈಂಗಿಕ ಕಿರುಕುಳ), ಮತ್ತು ಅನೈತಿಕ ವ್ಯಾಪಾರ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿತ್ತು. ನಂತರ, ಈ ಮೂವರ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯನ್ನೂ ಜಾರಿಗೊಳಿಸಲಾಗಿತ್ತು.
ಕೊಲೆ ಮಾಡಿದ್ದು ಹೇಗೆ?
ಅಂಕಿತಾ ಭಂಡಾರಿ ಸೆಪ್ಟೆಂಬರ್ 18ರಂದು ಕಾಣೆಯಾಗಿದ್ದರು. ಆ ದಿನ ಸಂಜೆ 8 ಗಂಟೆ ಸುಮಾರಿಗೆ ಆಕೆ ಪುಲ್ಕಿತ್ ಆರ್ಯ ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್, ಮತ್ತು ಇನ್ನೊಬ್ಬ ಉದ್ಯೋಗಿ ಅಂಕಿತ್ ಎಂಬಾತನೊಂದಿಗೆ ರಿಷಿಕೇಶಕ್ಕೆ ತೆರಳಿದ್ದರು. ತಿರುಗಿ ಬರುವಾಗ ಅವರು ಚಿಲ್ಲಾ ರಸ್ತೆಯ ಒಂದು ಕಾಲುವೆಯ ಬಳಿ ಮದ್ಯ ಸೇವಿಸಿದ್ದರು. , ಈ ವೇಳೆ, ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಹೇಳುವುದಾಗಿ ಅಂಕಿತಾ ಭಂಡಾರಿ ಎಚ್ಚರಿಸಿದ್ದಳು ಎನ್ನಲಾಗಿದೆ. ಕೋಪಗೊಂಡ ಮೂವರು ಆರೋಪಿಗಳು ಆಕೆಯನ್ನು ಕಾಲುವೆಗೆ ತಳ್ಳಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಂಕಿತಾ ತಾಯಿಯ ಆಕ್ರೋಶ
ತೀರ್ಪಿಗೆ ಕೆಲವು ಗಂಟೆಗಳ ಮುಂಚೆ, ಅಂಕಿತಾ ಅವರ ತಾಯಿ ಎಲ್ಲಾ ಮೂವರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಕಣ್ಣೀರು ಹಾಕಿ ಕೋರಿದ್ದರು. “ಕ್ರಿಮಿನಲ್‌ಗಳಿಗೆ ಮರಣದಂಡನೆ ವಿಧಿಸಲಿ. ಉತ್ತರಾಖಂಡದ ಜನರೇ ನಮಗೆ ಬೆಂಬಲ ನೀಡಿ, ಕೋಟದ್ವಾರ ನ್ಯಾಯಾಲಯಕ್ಕೆ ಬಂದು ನಮ್ಮ ಧೈರ್ಯವನ್ನು ಹೆಚ್ಚಿಸಿ,” ಎಂದು ಅವರು ಸುದ್ದಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು.



















