ಬೆಂಗಳೂರು: ಬಿಸಿಸಿಐನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (CSKCL) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ‘ದಿ ಹಿಂದೂ ಬಿಸಿನೆಸ್‌ಲೈನ್’ ವರದಿ ಮಾಡಿದೆ.
ಈ ಹಿಂದೆ ಚೆನ್ನೈ ಫ್ರಾಂಚೈಸಿಯ ಮಾಲೀಕರಾಗಿದ್ದ ‘ಇಂಡಿಯಾ ಸಿಮೆಂಟ್ಸ್’ ಅನ್ನು ಡಿಸೆಂಬರ್ 2024ರಲ್ಲಿ ‘ಅಲ್ಟ್ರಾಟೆಕ್’ ಕಂಪನಿ ಖರೀದಿಸಿತ್ತು. ಈ ಕಾರಣದಿಂದ ಶ್ರೀನಿವಾಸನ್ ಅಥವಾ ಅವರ ಪುತ್ರಿ ರೂಪಾ ಗುರುನಾಥ್ ಅವರು ಸಿಎಸ್‌ಕೆಸಿಎಲ್ ಮಂಡಳಿಯಲ್ಲಿ ಇರಲಿಲ್ಲ. ಆದರೆ, ಮೂರು ತಿಂಗಳ ನಂತರ, ಫೆಬ್ರವರಿಯಲ್ಲಿ ಅವರಿಬ್ಬರನ್ನೂ ಹೆಚ್ಚುವರಿ ನಿರ್ದೇಶಕರಾಗಿ ಮರುನೇಮಕ ಮಾಡಲಾಯಿತು.
ಸಿಎಸ್‌ಕೆಸಿಎಲ್‌ನಲ್ಲಿ ಶ್ರೀನಿವಾಸನ್ ಅವರು 0.11% ಶೇರುಗಳನ್ನು ಹೊಂದಿದ್ದರೆ, ಅವರ ಪತ್ನಿ ಚಿತ್ರಾ ಶ್ರೀನಿವಾಸನ್ 0.03% ಮತ್ತು ಪುತ್ರಿ ರೂಪಾ 0.01% ಶೇರುಗಳನ್ನು ಹೊಂದಿದ್ದಾರೆ. ಶ್ರೀನಿವಾಸನ್ ಅವರ ಆಪ್ತರಾದ ಕೆ. ಎಸ್. ವಿಶ್ವನಾಥನ್ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಸಿಎಸ್‌ಕೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, 2028ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಸಿಎಸ್‌ಕೆ ಹೇಳಿದೆ.
ಸಿಎಸ್‌ಕೆಸಿಎಲ್ ವಾರ್ಷಿಕ ವರದಿ
“ಐಪಿಎಲ್‌ನ 18ನೇ ಆವೃತ್ತಿಯು 2025ರ ಮಾರ್ಚ್ 22ರಂದು ಆರಂಭವಾಗಿ, ಪಂದ್ಯಗಳು ಮಾರ್ಚ್‌ನಿಂದ ಜೂನ್‌ವರೆಗೆ ನಡೆದವು. ನಮ್ಮ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯದಿದ್ದರೂ, ಮುಂಬರುವ ಸೀಸನ್‌ಗಳಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡುವ ಮತ್ತು ಉತ್ತಮ ಪ್ರದರ್ಶನ ನೀಡುವ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ.” ಎಂದು ಸಿಎಸ್‌ಕೆ ಹೇಳಿದೆ.
ವರದಿಯು ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದೆ
ಕಂಪನಿಯು ಇತರ ರಾಷ್ಟ್ರಗಳು ಆಯೋಜಿಸುವ ಟಿ20 ಲೀಗ್‌ಗಳಲ್ಲಿ ಭಾಗವಹಿಸುವ ಮೂಲಕ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತಿದೆ. ದಕ್ಷಿಣ ಆಫ್ರಿಕಾದ ಸಿಎಸ್‌ಎ ಟಿ20 ಲೀಗ್‌ನಲ್ಲಿ ‘ಜೋಬರ್ಗ್ ಸೂಪರ್ ಕಿಂಗ್ಸ್’ ಮತ್ತು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ‘ಟೆಕ್ಸಾಸ್ ಸೂಪರ್ ಕಿಂಗ್ಸ್’ ಎಂಬ ಜಾಗತಿಕ ಫ್ರಾಂಚೈಸಿಗಳನ್ನು ಹೊಂದಿದೆ. ಅಲ್ಲದೆ, ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಫ್ರಾಂಚೈಸಿ ಹೇಳಿದೆ.
ಇದಲ್ಲದೆ, ಕಂಪನಿಯು ತನ್ನ ಮಾಲೀಕತ್ವದಲ್ಲಿರುವ ವಿವಿಧ ಕ್ರೀಡಾ ಮೈದಾನಗಳು, ಅಂಕಣಗಳು, ಕ್ರೀಡಾಂಗಣಗಳು ಮತ್ತು ಇತರ ಭೂಮಿಗಳಿಂದ ಹಣಗಳಿಸಲು (monetise) ತನ್ನ ಮೆಮೊರಾಂಡಮ್ ಆಫ್ ಅಸೋಸಿಯೇಷನ್‌ಗೆ ತಿದ್ದುಪಡಿ ತರಲು ಬಯಸಿದೆ. ಈ ಪ್ರಸ್ತಾವನೆಯಿಂದ ಬರುವ ಹೆಚ್ಚುವರಿ ಆದಾಯವು ಕಂಪನಿಯ ಅಸ್ತಿತ್ವದಲ್ಲಿರುವ ವ್ಯವಹಾರಕ್ಕೆ ಪೂರಕವಾಗಲಿದೆ,” ಎಂದು ವರದಿಯಲ್ಲಿ ತಿಳಿಸಲಾಗಿದೆ.