ಬಳ್ಳಾರಿ : ದೇಶದಲ್ಲಿ ಎಲ್ಲ ಧರ್ಮ, ಜಾತಿ, ಸಂಸ್ಕೃತಿ, ಭಾಷೆಯ ಜನರಿದ್ದಾರೆ. ಹೀಗಾಗಿ ಈ ದೇಶದಲ್ಲಿ ಮಾತ್ರ ಸರ್ವಧರ್ಮ ಸಮನ್ವಯ ಕಾಣಲು ಸಾಧ್ಯ. ಈ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ವಿಶ್ವ ಮಾನವರಾಗಿ ಪ್ರಯತ್ನ ಮಾಡಬೇಕು ಹೊರತು ಅಲ್ಪ ಮಾನವರಾಗಲು ಯತ್ನಿಸಬಾರದು ಎಂದು ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದ್ದಾರೆ.
ಆರೋಗ್ಯ ಮಾತೆ ಧರ್ಮಕ್ಷೇತ್ರದ ಅಮೃತ ಮಹೋತ್ಸವಲ್ಲಿ ಬಡ ಕುಟುಂಬಗಳಿಗೆ ಧರ್ಮ ಸಂಸ್ಥೆ ನೀಡಿದ ಉಚಿತ ಮನೆಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಎಲ್ಲ ಧರ್ಮ, ಜಾತಿ, ಮತ, ಪಂಥ ಒಂದೇ. ಎಲ್ಲರೂ ಈ ಸಮಾಜದಲ್ಲಿ ಒಂದೇ ಎಂದು ಭಾವಿಸಬೇಕು. ದಯೆ, ಕರುಣೆ, ವಾತ್ಸಲ್ಯದಿಂದ ನೋಡಬೇಕು. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಛಿದ್ರವಾಗುತ್ತದೆ. ಇದನ್ನು ಅರಿತು ಪ್ರತಿಯೊಬ್ಬರು ಬದುಕು ಸಾಗಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ನಮ್ಮ ಅಪ್ಪ ವೀರಮಕ್ಕಳ ಕುಣಿತಕ್ಕೆ ಸೇರಿಸಿದ್ದರಿಂದ ಶಿಕ್ಷಣದಿಂದ ವಂಚಿತನಾಗಿದ್ದೆ. ಜತೆಗೆ ನಮ್ಮ ಮನೆಯಲ್ಲಿನ ಎಮ್ಮೆ ಮೇಯಿಸಲು ಹೋಗುತ್ತಿದ್ದೆ. ಆಗ ನಮ್ಮ ಹಳ್ಳಿಗೆ ರಾಜಪ್ಪ ಎಂಬ ಹೆಡ್ ಮಾಸ್ಟರ್ ಬಂದು ನನ್ನನ್ನು ನೇರವಾಗಿ ಕರೆದೊಯ್ದು ಐದನೇ ತರಗತಿಗೆ ಸೇರಿಸಿದ್ದರು. ನಮ್ಮ ಸಂವಿಧಾನ ಮತ್ತು ಒಬ್ಬ ಗುರುಗಳ ಕಾರಣದಿಂದ ನಾನು ನೇರವಾಗಿ ಐದನೇ ತರಗತಿಯಿಂದ ಶಿಕ್ಷಣ ಪಡೆದೆ. ಪರಿಣಾಮ ನಾನು ಎರಡೆರಡು ಬಾರಿ ಮುಖ್ಯಮಂತ್ರಿ ಆದೆ. ಹೀಗಾಗಿ ಪ್ರತಿಭೆಯನ್ನು, ಜ್ಞಾನ ವಿಕಾಸವನ್ನು ಗುರುತಿಸುವುದೇ ಶಿಕ್ಷಣ ಆಗಬೇಕು ಎಂದು ಹೇಳಿದರು.