ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಹಾಲಿ ಸಂಸದ ಡಾ. ಕೆ. ಸುಧಾಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಚುನಾವಣೆಯಲ್ಲಿ ಸಂಸದ ಕೆ.ಸುಧಾಕರ್ 7 ರಿಂದ 8 ಕೋಟಿ ರೂ. ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಗೆ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ. ಮುಂದೆ ಕಾಂಗ್ರೆಸ್ ಬಾವುಟ ಹಾರಿಸುತ್ತೇನೆ. ಮುಂದಿನ ನಗರಸಭೆ ಚುನಾವಣೆಯಲ್ಲಿ ‘ಕೈ’ ಬಾವುಟ ಹಾರಿಸುತ್ತೇನೆ ಎಂದು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಧಾಕರ್ ಒಬ್ಬ ಕೋವಿಡ್ ಕಳ್ಳ. ಆತನನ್ನು ಜೈಲಿಗೆ ಹಾಕೋವರೆಗೂ ನಾನು ವಿರಮಿಸುವುದಿಲ್ಲ. ತಾಕತ್ತು ಇದ್ರೆ ಆ ಕೇಸ್ ನಿಂದ ಬಚಾವ್ ಆಗಲಿ. ಕೆ.ಸುಧಾಕರ್ ಅಲ್ಲ, ಅವರ ಅಪ್ಪನ ಕೈಯಲ್ಲೂ ನನ್ನ ಏನೂ ಮಾಡೋಕೆ ಆಗಲ್ಲ ಎಂದು ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಸಂಸದ ಡಾ.ಕೆ.ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಮಧ್ಯೆ ಜಿದ್ದಾಜಿದ್ದಿ ನಡೆದಿತ್ತು. ಆದರೂ ಬಿಜೆಪಿ ಗೆದ್ದು ಬೀಗಿದೆ. ಹೀಗಾಗಿ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.