ನವದೆಹಲಿ: ದೆಹಲಿ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟವು ಸೋಲನುಭವಿಸಿದೆ. ಇಲ್ಲೆಲ್ಲ ಬಿಜೆಪಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ, ಈಗ ಲೋಕಸಭೆ ಚುನಾವಣೆ ನಡೆದರೂ ಬಿಜೆಪಿಯು 281 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್ ಡಿಎ ಮೈತ್ರಿಕೂಟವು 343 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 240 ಕ್ಷೇತ್ರಗಳಿಗೆ ತನ್ನ ಸ್ಥಾನಗಳನ್ನು ಇಳಿಸಿಕೊಂಡಿತ್ತು. ಎನ್ ಡಿ ಎ ಮೈತ್ರಿಕೂಟವು 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಒಂದು ವರ್ಷದಲ್ಲೇ ಜನರ ಒಲವು ಬಿಜೆಪಿ ಹಾಗೂ ಎನ್ ಡಿಎ ಪರ ವಾಲಿದೆ ಎಂದು ಸಮೀಕ್ಷೆ ತಿಳಿಸಿದೆ. ನರೇಂದ್ರ ಮೋದಿ ವರ್ಚಸ್ಸಿನಿಂದಾಗಿ ಬಿಜೆಪಿಯು ಸ್ಪಷ್ಟ ಬಹುಮತ ಸಾಧಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಕಾಂಗ್ರೆಸ್ ಸ್ಥಾನಗಳ ಇಳಿಕೆ
ಕಳೆದ ಲೋಕಸಭೆ ಚುನಾವಣೆಯಲ್ಲಿ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಏನಾದರೂ ಈಗ ಚುನಾವಣೆಗೆ ಸ್ಪರ್ಧಿಸಿದರೆ 78 ಕ್ಷೇತ್ರಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಇಂಡಿಯಾ ಒಕ್ಕೂಟದ ಬಲವೂ ಕುಸಿಯಲಿದೆ. ಇಂಡಿಯಾ ಮೈತ್ರಿಕೂಟದ ಕ್ಷೇತ್ರಗಳು 232ರಿಂದ 188ಕ್ಕೆ ಇಳಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಹೆಚ್ಚಾಗಿದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರೇ ಪರಸ್ಪರ ಟೀಕೆಗಳನ್ನು ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಲ್ಲೇ ಸೀಟು ಹಂಚಿಕೆ ವಿಚಾರವಾಗಿ ಭಿನ್ನಮತ ಉಂಟಾಗಿ, ಸ್ವತಂತ್ರವಾಗಿ ಸ್ಪರ್ಧಿಸುವಂತಾಗಿದೆ. ಇದರಿಂದಾಗಿ ಜನ ಇಂಡಿಯಾ ಒಕ್ಕೂಟದ ಮೇಲಿನ ಭರವಸೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.