ನವದೆಹಲಿ: ಭಾರತದ ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಭಾರತೀಯ ಪಿಚ್‌ಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರು ಕೂಡ ಇಂತಹ ಪಿಚ್‌ಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರೇ ದಿನಗಳಲ್ಲಿ 30 ರನ್‌ಗಳ ಹೀನಾಯ ಸೋಲು ಕಂಡ ನಂತರ ಭಾರತದ ಪಿಚ್‌ಗಳು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್, ಇಂತಹ ಪಿಚ್‌ಗಳು ಟೆಸ್ಟ್ ಕ್ರಿಕೆಟ್‌ನ ಸಮಗ್ರತೆ ಮತ್ತು ಭವಿಷ್ಯವನ್ನು ಹಾಳುಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. “ಟೆಸ್ಟ್ ಕ್ರಿಕೆಟ್‌ಗೆ ಸಂಪೂರ್ಣವಾಗಿ ‘ರೆಸ್ಟ್ ಇನ್ ಪೀಸ್’ (RIP) ಹೇಳಲಾಗಿದೆ. ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಏನೂ ಉಳಿದಿಲ್ಲ. ಇಂಗ್ಲೆಂಡ್‌ನಲ್ಲಿ ನಡೆದ ಪಂದ್ಯಗಳು ಅದ್ಭುತವಾಗಿದ್ದವು. ಅಲ್ಲಿನ ಪಿಚ್‌ಗಳು ಮತ್ತು ನಮ್ಮ ಹುಡುಗರು ಗೆದ್ದ ರೀತಿಯನ್ನು ನಾವು ಶ್ಲಾಘಿಸಿದ್ದೇವೆ. ಅದು ನಿಜವಾದ ಟೆಸ್ಟ್ ಕ್ರಿಕೆಟ್, ಅಲ್ಲಿ ರೋಮಾಂಚನವಿತ್ತು. ಆದರೆ ಇಲ್ಲಿನ ಪಿಚ್‌ಗಳು ಕೆಟ್ಟದಾಗಿವೆ,” ಎಂದು ಅವರು ಹೇಳಿದ್ದಾರೆ.
ಇಂತಹ ಪಿಚ್‌ಗಳಲ್ಲಿ ಚೆಂಡು ಎಲ್ಲಿ ಬಿದ್ದು ಎಲ್ಲಿ ತಿರುಗುತ್ತದೆ ಎಂದು ಬ್ಯಾಟರ್‌ಗೆ ಯಾವುದೇ ಸುಳಿವು ಸಿಗುವುದಿಲ್ಲ. “ನಿಮ್ಮ ತಂತ್ರಗಾರಿಕೆ ಎಷ್ಟೇ ಉತ್ತಮವಾಗಿದ್ದರೂ, ನೀವು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿಯೇ ಆಗಿದ್ದರೂ, ಇಂತಹ ಪಿಚ್‌ಗಳಲ್ಲಿ ಉಳಿಯಲು ಸಾಧ್ಯವಿಲ್ಲ. ಒಂದು ಚೆಂಡು ಎಗರಿದರೆ, ಇನ್ನೊಂದು ಕೆಳಗೆ ಉಳಿಯುತ್ತದೆ. ಮತ್ತೊಂದು ಅನಿರೀಕ್ಷಿತವಾಗಿ ತಿರುಗಿ ನೀವು ಔಟಾಗುತ್ತೀರಿ. ಇಲ್ಲಿ ಕೌಶಲ್ಯಕ್ಕೆ ಬೆಲೆ ಇಲ್ಲ; ಪಿಚ್ ಎಲ್ಲವನ್ನೂ ನಿರ್ಧರಿಸುತ್ತಿದೆ. ಇದು ಹೊಸದೇನಲ್ಲ, ವರ್ಷಗಳಿಂದ ಇದೇ ನಡೆಯುತ್ತಿದೆ,” ಎಂದು ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ.
ನವೆಂಬರ್ 2024ರಿಂದ ಭಾರತದ ಪಿಚ್‌ಗಳು ಚರ್ಚೆಗೆ ಒಳಗಾಗುತ್ತಿದ್ದು, ಅಂದು ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಭಾರತ ವೈಟ್‌ವಾಶ್ ಆಗಿತ್ತು. ಪ್ರಸ್ತುತ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಭಾರತ, ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಗೌತಮ್ ಗಂಭೀರ್ ನೇತೃತ್ವದ ತಂಡದ ಆಡಳಿತ ಮಂಡಳಿ ಯಾವ ರೀತಿಯ ಪಿಚ್ ಅನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಯಕ್ಷಗಾನದ ಒಳಗೆ ಎಷ್ಟೋ ಬಾರಿ ಸಲಿಂಗಕಾಮ ನಡೆಯುತ್ತದೆ | ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ



















