ಬೆಳಗಾವಿ: ಇತ್ತೀಚೆಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ರಾಜಾತಿಥ್ಯ ಸಿಕ್ಕ ನಂತರ ಈ ವಿಚಾರಗಳು ಬಯಲಿಗೆ ಬರುತ್ತಿವೆ. ಆನಂತರ ಒಂದೊಂದೇ ಜೈಲಿನ ಕರ್ಮಕಾಂಡಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಕಲಬುರಗಿ ಸೆಂಟ್ರಲ್ ಜೈಲಿನ ಕರ್ಮಕಾಂಡ ಬಯಲಿಗೆ ಬಂದಿತ್ತು. ಈಗ ಬೆಳಗಾವಿ ಸೆಂಟ್ರಲ್ ಜೈಲ್ ನ ಕರ್ಮಕಾಂಡ ಬಯಲಿಗೆ ಬಂದಿದೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹೊತ್ತಿನಲ್ಲೇ ಹಿಂಡಲಗಾ ಜೈಲಿನ ಕರ್ಮಕಾಂಡ ಬಯಲಾಗಿದೆ. ಹಿಂಡಲಗಾ ಜೈಲಿನಲ್ಲಿ ಕೈದಿಗಳು ಬಿಂದಾಸ್ ಆಗಿ ಮೊಬೈಲ್ ಬಳಸುತ್ತಿರುವುದು, ಗಾಂಜಾ ಸೇವಿಸುತ್ತಿರುವುದು, ಸಿಗರೇಟ್ ಸೇದುವುದು ಬೆಳಕಿಗೆ ಬಂದಿದೆ. ಮದ್ಯದ ಬಾಟಲಿಗಳು ಹೊರಗಿನಿಂದ ಪೂರೈಕೆಯಾಗುತ್ತಿರುವುದು ಕೂಡ ಬಹಿರಂಗವಾಗಿದೆ.
ಜೈಲಿನ ಸರ್ಕಲ್ ನಂಬರ್ 2ರ ಎರಡನೇ ಬ್ಯಾರಕ್ನಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ರಾಜಾರೋಷವಾಗಿ ಹಣವಿಟ್ಟು ಇಸ್ಪೀಟ್ ಆಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಹಣ ಕೊಟ್ಟರೆ ಕೈದಿಗಳಿಗೆ ಮೊಬೈಲ್ ಸಿಗುತ್ತದೆ. ಹಣ ನೀಡಿದರೆ ಸಾಕು ಎಲ್ಲ ವ್ಯವಸ್ಥೆ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ನೆಲಮಂಗಲ ಮೂಲದ ಮುಬಾರಕ್ ಎಂಬ ಕೈದಿ ಇಸ್ಪೀಟ್ ಆಡುವ ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ.