ಬೀಜಿಂಗ್: ಕನ್ನಡ ಸಿನಿಮಾ ಲೋಕದ ದಂತಕಥೆ, ನಟಸಾರ್ವಭೌಮ, ವರನಟ ಡಾ.ರಾಜ್ಕುಮಾರ್ ಅವರು ಕನ್ನಡ ನಾಡಿನ ಮನೆ-ಮನಗಳಲ್ಲಿ ಅಜರಾಮರರಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈಗ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿರುವ ವಿಡಿಯೋವೊಂದರಿಂದ ಚೀನಾದಲ್ಲೂ ಡಾ.ರಾಜ್ ಅಭಿಮಾನಿಗಳನ್ನು ಹೊಂದಿರುವುದು ಪಕ್ಕಾ ಆಗಿದೆ.
ಹೌದು, ಚೀನಾದ ಸೂಪರ್ ಮಾರ್ಕೆಟ್ ವೊಂದರಲ್ಲಿ ಡಾ.ರಾಜ್ಕುಮಾರ್(Dr. Rajkumar) ಅವರ ಗಂಧದಗುಡಿ ಸಿನಿಮಾದ “ನಾವಾಡುವ ನುಡಿಯೇ ಕನ್ನಡ ನುಡಿ” (Navaduva Nudie) ಅನುರಣಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಬೀದಿಯಲ್ಲಿ ಸಂಚರಿಸುತ್ತಿದ್ದ ಭಾರತೀಯ ದಂಪತಿಯೇ ಈ ವಿಡಿಯೋವನ್ನು ಸೆರೆಹಿಡಿದು, ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪ್ರವೀಣ್ ಆರ್. ಎಂಬವರು ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಅದು 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಹಾಗೂ ಲೈಕ್ ಗಳನ್ನು ಪಡೆದಿದೆ. ಹಲವರು ಇದನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ.

ಚೀನಾದಲ್ಲಿ ಅಣ್ಣಾವ್ರ ಹಾಡು ಸದ್ದುಮಾಡುತ್ತಿರುವ ವಿಚಾರ ಕೇಳಿ ಡಾ.ರಾಜ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹೃದಯದ ಇಮೋಜಿಗಳನ್ನು ಹಾಕುವ ಮೂಲಕ ಕೆಲವರು ಖುಷಿ ಹಂಚಿಕೊಂಡರೆ, ಈ ವಿಡಿಯೋ ನಮ್ಮ ಹೃದಯ ಗೆದ್ದಿತು, ಮನತುಂಬಿ ಬಂತು ಎಂದೆಲ್ಲ ಕೆಲವರು ಪ್ರತಿಕ್ರಿಯಿಸಿದ್ದಾರೆ. “ವಾವ್, ಚೀನಾ ನಮ್ಮ ಸರಳತೆಯನ್ನು ಇಷ್ಟಪಟ್ಟಿದೆ. ಅಣ್ಣಾವ್ರ ಮತ್ತಷ್ಟು ಹಾಡು ಕೇಳುವ ಕಾತರವಿದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಅಣ್ಣಾವ್ರ ಜನಪ್ರಿಯತೆ ಗಡಿಗಳನ್ನು ಮೀರಿದ್ದು ಎಂದು ಕೆಲವರು ಹೇಳಿದರೆ, “ಈ ಹಾಡು ಕಾಲಾತೀತವಾಗಿದ್ದು, ಪ್ರತಿಯೊಂದು ಸನ್ನಿವೇಶಕ್ಕೂ ಹೊಂದುತ್ತದೆ. ಡಾ.ರಾಜ್ಕುಮಾರ್ ಅವರ ಹಾಡುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಬೇಕು” ಎಂದು ಕೆಲವರು ಆಗ್ರಹಿಸಿದ್ದಾರೆ.
ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರು ನಟರಾದ ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ 5 ದಶಕಗಳ ವೃತ್ತಿ ಬದುಕಿನಲ್ಲಿ ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಸಾರ್ವಭೌಮ ಎಂಬ ಬಿರುದು ಪಡೆದಿರುವ ಅವರು, ಮೈಸೂರು ವಿವಿ ಗೌರವ ಡಾಕ್ಟರೇಟ್ ಪದವಿಯನ್ನೂ ಮುಡಿಗೇರಿಸಿಕೊಂಡವರು. ಭಾರತ ಸರ್ಕಾರ ಕೊಡಮಾಡುವ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆಯಂಥ ಪ್ರತಿಷ್ಠಿತ ಪ್ರಶಸ್ತಿಗಳೂ ಅಣ್ಣಾವ್ರ ಮುಡಿಗೇರಿವೆ.