ಬೆಳಗಾವಿ: ರಾಜ್ಯದ ಬಳ್ಳಾರಿ ಬಿಮ್ಸ್ ನಲ್ಲಿ ಬಾಣಂತಿಯರ ಸಾವಿನ ಪ್ರಕರಣ ದೊಡ್ಡ ಸದ್ದು ಮಾಡುತ್ತಿದ್ದು, ಜನರು ಆರೋಗ್ಯ ಇಲಾಖೆಯ ದುಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಮತ್ತೊಂದು ವರದಿ ಆತಂಕ ಸೃಷ್ಟಿಸುತ್ತಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕೇವಲ 6 ತಿಂಗಳಲ್ಲಿ 29 ಬಾಣಂತಿಯರು ಹಾಗೂ 322 ಶಿಶು ಮರಣ ಸಂಭವಿಸಿದ್ದು, ರಾಜ್ಯದ ಎಲ್ಲ ಆಸ್ಪತ್ರೆಗಳ ಸ್ಥಿತಿಯೂ ಇದೆ ರೀತಿಯಾಗಿದೆಯಾ? ಎಂಬ ಆತಂಕ ಸೃಷ್ಟಿಸುವಂತಿದೆ. ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 2024ರ ಏಪ್ರಿಲ್ನಿಂದ ಅಕ್ಟೋಬರ್ ವರೆಗೆ 29 ಜನ ಬಾಣಂತಿಯರ ಸಾವು ಸಂಭವಿಸಿವೆ. ಸಮರ್ಪಕ ಚಿಕಿತ್ಸೆ ಸಿಗದೆ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣದಿಂದ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಪ್ರಭಾರಿ ಡಿಎಚ್ಒ ಶರಣಪ್ಪ ಗಡೆದ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿಯೇ 172 ಶಿಶುಗಳು ಸಾವನ್ನಪ್ಪಿವೆ. ಅಂದರೆ, ಪ್ರತಿ ತಿಂಗಳು 45 ರಿಂದ 52 ಸರಾಸರಿಯಲ್ಲಿ ಶಿಶುಗಳು ಮರಣ ಹೊಂದಿವೆ. ತೂಕ ಕಡಿಮೆ, ಸರಿಯಾಗಿ ಬೆಳವಣಿಗೆ ಆಗದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ನ್ಯುಮೋನಿಯಾ, ಉಸಿರುಗಟ್ಟುವಿಕೆ ಮತ್ತು ಅಪೌಷ್ಟಿಕತೆಯಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ. ಕೂಡಲೇ ಆರೋಗ್ಯ ಇಲಾಖೆ ಇತ್ತ ಕಡೆ ಗಮನ ಹರಿಸಿ, ಈ ಸಮಸ್ಯೆ ನೀಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.