ಆನೇಕಲ್: ಯುಗಾದಿ(Ugadi)ಯ ಸಂಭ್ರಮದಲ್ಲಿದ್ದ ರೌಡಿಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಗೊಲ್ಲಹಳ್ಳಿ ಹತ್ತಿರ ಈ ಘಟನೆ ನಡೆದಿದೆ. ಮಂಜ ಅಲಿಯಾಸ್ ನೇಪಾಳಿ ಮಂಜ ಹತ್ಯೆಯಾದ ರೌಡಿಶೀಟರ್ ಎನ್ನಲಾಗಿದೆ. ಯುಗಾದಿ ಹಬ್ಬದ ದಿನ ಎಣ್ಣೆ ಪಾರ್ಟಿಗೆ ಹೋಗಿದ್ದ ವೇಳೆ, ಎರಡು ಬೈಕ್ ನಲ್ಲಿ ಬಂದಿದ್ದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ಹೆಬ್ಬಗೋಡಿ ರೌಡಿಶೀಟರ್ ಜಗ್ಗ ಅಲಿಯಾಸ್ ಜಗದೀಶ್ ಮತ್ತವನ ಗ್ಯಾಂಗ್ ಕೊಲೆ ಮಾಡಿರಬಹುದು ಎಂಬ ಆರೋಪ ಕೇಳಿ ಬಂದಿದೆ. ಕೊಲೆಯಾಗಿರುವ ನೇಪಾಳಿ ಮಂಜ ರೌಡಿಸಂ ಬಿಟ್ಟು ಕುಟುಂಬ ಸಮೇತರಾಗಿ ಕುಣಿಗಲ್‍ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಊರಿಗೆ ಬಂದಿದ್ದ ಎನ್ನಲಾಗಿದೆ. ಮಂಜ ರೌಡಿಸಂ ಬಿಟ್ಟರೂ ಆತನ ಮೇಲಿನ ದ್ವೇಷ ಮಾತ್ರ ಬಿಟ್ಟಿಲ್ಲ. ಪರಿಣಾಮ ಅದೇ ದ್ವೇಷಕ್ಕೆ ಬಲಿಯಾಗಿದ್ದಾನೆ.
ಎರಡು ಕೊಲೆ ಸೇರಿದಂತೆ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೃತ ನೇಪಾಳಿ ಮಂಜ ಆರೋಪಿಯಾಗಿದ್ದ. ಎರಡು ಬಾರಿ ಗೂಂಡಾ ಕಾಯ್ದೆ ಅಡಿ ಆತನನ್ನು ಬಂಧಿಸಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಪೊಲೀಸರು ಗಡಿಪಾರು ಕೂಡ ಮಾಡಿದ್ದರು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.