ಬೆಂಗಳೂರು: ಅಪ್ರಾಪ್ತ ಬಾಲಕರು ಹಾಗೂ ಬಾಲಕಿಯರು ಕೂಡ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ದಿಸೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಹತ್ವದ ಆದೇಶ ಹೊರಡಿಸಿದೆ. ಇನ್ನುಮುಂದೆ, 10 ವರ್ಷದ ಮಕ್ಕಳು ಕೂಡ ಬ್ಯಾಂಕ್ ಉಳಿತಾಯ ಖಾತೆಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಬಹುದು ಎಂಬುದಾಗಿ ಆದೇಶ ಹೊರಡಿಸಿದೆ. ಹೊಸ ನಿಯಮವು 2025ರ ಜುಲೈ 1ರಿಂದ ಜಾರಿಗೆ ಬರಲಿದೆ.
“ಜುಲೈ 1ರಿಂದ 10 ವರ್ಷದ ಮಕ್ಕಳು ಕೂಡ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆಯಬಹುದು. ಬ್ಯಾಂಕುಗಳು ಮಕ್ಕಳಿಗೆ ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ, ಚೆಕ್ ಬುಕ್ ಸೇರಿ ಹಲವು ಸೌಲಭ್ಯಗಳನ್ನು ನೀಡಬೇಕು. ಇದರ ಜತೆಗೆ ಮಕ್ಕಳಿಗೆ ರಿಸ್ಕ್ ಮ್ಯಾನೇಜ್ ಮೆಂಟ್, ಬ್ಯಾಂಕಿಂಗ್ ಕುರಿತು ಮಾಹಿತಿ ಒದಗಿಸಬೇಕು” ಎಂಬುದಾಗಿ ಆರ್ ಬಿಐ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮಕ್ಕಳು ಇಷ್ಟೇ ಹಣವನ್ನು ವಿತ್ ಡ್ರಾ ಮಾಡುವ ಮಿತಿ ಇರುತ್ತದೆ.
10 ವರ್ಷದೊಳಗಿನವರು ಬ್ಯಾಂಕ್ ಖಾತೆ ತೆರೆಯಬಹುದು. ಆದರೆ, ಅವರು ಪೋಷಕರ ಮೇಲ್ವಿಚಾರಣೆಯಲ್ಲಿ ಖಾತೆಯನ್ನು ನಿರ್ವಹಿಸಬೇಕಾಗುತ್ತದೆ ಎಂದು ಅದು ಹೇಳಿದೆ. ಅಪ್ರಾಪ್ತ ವಯಸ್ಕರಿಗೆ ಸೇರಿದ ಬ್ಯಾಂಕ್ ಖಾತೆಯಿಂದ, ಅದು ಸ್ವತಂತ್ರವಾಗಿ ನಿರ್ವಹಿಸಲ್ಪಡಲಿ ಅಥವಾ ಪೋಷಕರಿಂದ ನಿರ್ವಹಿಸಲ್ಪಡಲಿ, ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಓವರ್ ಡ್ರಾ ಮಾಡಲು ಅನುಮತಿಸಲಾಗುವುದಿಲ್ಲ. ಆರ್ಬಿಐ ವರದಿಯ ಪ್ರಕಾರ, ಯಾವಾಗಲೂ ಕ್ರೆಡಿಟ್ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ ಹೆಸರಿನಲ್ಲಿ ಉಳಿತಾಯ ಖಾತೆ ಅಥವಾ ಅವಧಿ ಠೇವಣಿ ಖಾತೆಯನ್ನು ಹೊಂದಿದ್ದರೆ, ಆ ಖಾತೆಯಲ್ಲಿರುವ ಮಾದರಿ ಸಹಿ ಮತ್ತು ಇತರ ವಿವರಗಳನ್ನು ಪುನಃ ಸಲ್ಲಿಸಬೇಕು ಎಂದು ಆರ್ ಬಿಐ ತಿಳಿಸಿದೆ.