ಬೆಂಗಳೂರು: ಕೇಂದ್ರ ಸರ್ಕಾರವು ಇತ್ತೀಚೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯಲ್ಲಿ (ಇಪಿಎಫ್ಒ) ಹಲವು ಬದಲಾವಣೆ ಮಾಡುತ್ತಿದೆ. ಪಿಎಫ್ ಸದಸ್ಯರಿಗೆ ಅನುಕೂಲವಾಗುವ, ಬೇಗನೆ ಕ್ಲೇಮ್ ಸೆಟಲ್ ಮೆಂಟ್ ಆಗುವ, ಆನ್ ಲೈನ್ ಮೂಲಕವೇ ತಿದ್ದುಪಡಿ ಮಾಡಲು ಅವಕಾಶ ನೀಡುವುದು ಸೇರಿ ವಿವಿಧ ಸೌಕರ್ಯಗಳನ್ನು ನೀಡುತ್ತಿದೆ. ಆದರೆ, ಇದರ ಮಧ್ಯೆಯೇ, ಖಾಸಗಿ ಉದ್ಯೋಗಿಗಳಿಗೆ ಅನನುಕೂಲವಾಗುವ ತೀರ್ಮಾನವೊಂದನ್ನು ಇಪಿಎಫ್ಒ ತೆಗೆದುಕೊಂಡಿದೆ.
ಹೌದು, ಒಬ್ಬ ಉದ್ಯೋಗಿಯು ನಿವೃತ್ತಿ ಅಂದರೆ, 58 ವರ್ಷಕ್ಕೆ ಮೊದಲೇ ಖಾಸಗಿ ಕಂಪನಿಯ ಉದ್ಯೋಗವನ್ನು ಬಿಟ್ಟರೆ ಅಥವಾ ಕಂಪನಿಯೇ ಆತನನ್ನು ಫೈರ್ ಮಾಡಿದರೆ, ಪಿಎಫ್ ಕ್ಲೇಮ್ ಸೆಟಲ್ ಮೆಂಟ್ ಇನ್ನುಮುಂದೆ ವಿಳಂಬವಾಗಲಿದೆ. ಕೇಂದ್ರ ಸರ್ಕಾರವು ಫೈನಲ್ ಸೆಟಲ್ ಮೆಂಟ್ ಅವಧಿಯನ್ನು ಎರಡು ತಿಂಗಳಿಂದ ಒಂದು ವರ್ಷಕ್ಕೆ ಏರಿಕೆ ಮಾಡಿರುವುದು ಇಪಿಎಫ್ಒ ಸದಸ್ಯರಿಗೆ ಕಷ್ಟವಾಗಲಿದೆ.
ಅಂದರೆ, ಉದ್ಯೋಗ ತೊರೆದ ಅಥವಾ ವಜಾಗೊಂಡ ವ್ಯಕ್ತಿಯು ಇನ್ನುಮುಂದೆ, ಕೆಲಸ ಬಿಟ್ಟ 12 ತಿಂಗಳ ನಂತರವೇ ಪಿಎಫ್ ಫೈನಲ್ ಸೆಟಲ್ ಮೆಂಟ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೂ ಮೊದಲು ಎರಡು ತಿಂಗಳಲ್ಲೇ ಅರ್ಜಿ ಸಲ್ಲಿಸಬಹುದಿತ್ತು. ಅಲ್ಲದೆ, ಕೆಲಸ ತೊರೆದ 3 ವರ್ಷದ ಬಳಿಕವೇ ಪಿಂಚಣಿ ನೀಡಲಾಗುವುದು ಎಂದು ಇಪಿಎಫ್ಒ ತಿಳಿಸಿದೆ. ಇದರಿಂದ ಕೂಡ ಉದ್ಯೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಭಾರತದಲ್ಲಿ 2025ರಲ್ಲಿಯೇ ಸಾವಿರಾರು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್, ಟಿಸಿಎಸ್, ಇನ್ಫೋಸಿಸ್ ಸೇರಿ ಪ್ರಸಕ್ತ ವರ್ಷದಲ್ಲಿಯೇ ಸುಮಾರು 50 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿವೆ. ಹೀಗೆ ವಜಾಗೊಂಡ ನೌಕರರಿಗೆ ಪಿಎಫ್ ಹಣವೇ ಆಧಾರವಾಗಿರುತ್ತದೆ. ಆದರೆ, ಈಗ ಹೊಸ ನಿಯಮವನ್ನು ಜಾರಿಗೆ ತಂದಿರುವುದು ನೌಕರರಿಗೆ ಕಷ್ಟವಾಗಲಿದೆ.