ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಲಕ್ಷಾಂತರ ಸದಸ್ಯರಿಗೆ ಈಗ ಗುಡ್ ನ್ಯೂಸ್ ದೊರೆತಿದೆ. ಹೌದು, ಕ್ಲೇಮ್ ಮಾಡದೆ ಪಿಎಫ್ ಖಾತೆಯಲ್ಲಿಯೇ ಉಳಿಸಿಕೊಂಡ, ಖಾತೆ ನಿಷ್ಕ್ರಿಯಗೊಂಡ ಸದಸ್ಯರಿಗೆ ಈಗ ಕ್ಲೇಮ್ ಅರ್ಜಿ ಸಲ್ಲಿಸದೆಯೇ ಪಿಎಫ್ ಖಾತೆಯಲ್ಲಿರುವ ಹಣವನ್ನು ನೀಡಲು ಕೇಂದ್ರ ಕಾರ್ಮಿಕ ಸಚಿವಾಲಯವು ಅನುಮೋದನೆ ನೀಡಿದೆ. ಹಾಗಾಗಿ, ಖಾತೆ ನಿಷ್ಕ್ರಿಯಗೊಂಡರೂ ಸದಸ್ಯರಿಗೆ ಈಗ ಹಣ ಲಭಿಸಲಿದೆ.
ಉದ್ಯೋಗ ಬದಲಾವಣೆ, ಕೆಲಸಕ್ಕೆ ರಾಜೀನಾಮೆ ನೀಡುವುದು ಸೇರಿ ಹಲವು ಕಾರಣಗಳಿಂದಾಗಿ ಪಿಎಫ್ ಖಾತೆಯಲ್ಲಿ ಹಣವು ಬಾಕಿ ಉಳಿಯುತ್ತದೆ. ಸತತ ಮೂರು ವರ್ಷಗಳವರೆಗೆ ಖಾತೆಗೆ ಹಣ ಜಮೆಯಾಗದಿದ್ದರೆ, ಅದನ್ನು ನಿಷ್ಕ್ರಿಯ ಖಾತೆ ಎಂದು ತೀರ್ಮಾನಿಸಲಾಗುತ್ತದೆ. ನಿಷ್ಕ್ರಿಯ ಖಾತೆ ಎಂದರೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಜಮೆಯಾಗುವುದಿಲ್ಲ. ಹೀಗೆ ನಿಷ್ಕ್ರಿಯಗೊಂಡಿರುವ ಖಾತೆಗಳಲ್ಲಿ ಬಾಕಿ ಉಳಿದ ಮೊತ್ತವನ್ನು ಸದಸ್ಯರಿಗೆ ನೀಡಲು ತೀರ್ಮಾನಿಸಲಾಗಿದೆ.
ದೇಶದಲ್ಲಿ 31.86 ಲಕ್ಷ ಇಪಿಎಫ್ ಖಾತೆಗಳನ್ನು ನಿಷ್ಕ್ರಿಯ ಎಂದು ಘೋಷಿಸಲಾಗಿದೆ. ಈ ಖಾತೆಗಳಲ್ಲಿ ಒಂದು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಹಣ ಇದ್ದರೆ, ಅದನ್ನು ಕ್ಲೇಮ್ ಮಾಡದೆಯೇ ಸದಸ್ಯರಿಗೆ ನೀಡಲಾಗುತ್ತದೆ. ಹೀಗೆ ನಿಷ್ಕ್ರಿಯ ಖಾತೆಗಳಲ್ಲಿಯೇ 10 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ಬಾಕಿ ಉಳಿದಿದೆ. ಇದನ್ನು ಸದಸ್ಯರಿಗೆ ನೀಡಲು ಇಪಿಎಫ್ಒ ಹಾಗೂ ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಇಪಿಎಫ್ಒಗೆ ಸದಸ್ಯರು ನೀಡಿದ ಬ್ಯಾಂಕ್ ಖಾತೆಗಳಿಗೆ ಹಣವು ಜಮೆಯಾಗಲಿದೆ. ಇದಕ್ಕಾಗಿ ಇಪಿಎಫ್ಒ ಸದಸ್ಯರು ಯಾವುದೇ ಕ್ಲೇಮ್ ಅರ್ಜಿ ಸಲ್ಲಿಸಬೇಕಿಲ್ಲ. ಆಟೋಮ್ಯಾಟಿಕ್ ಆಗಿಯೇ ಸದಸ್ಯರ ಖಾತೆಗಳಿಗೆ ಒಂದು ಸಾವಿರ ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತವು ಜಮೆಯಾಗಲಿದೆ.
ಇದನ್ನೂ ಓದಿ : JSWನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ‘iCar V23’.. ಕ್ರ್ಯಾಶ್ ಟೆಸ್ಟ್‌ನಲ್ಲಿ ಭರ್ಜರಿ 5-ಸ್ಟಾರ್ ರೇಟಿಂಗ್!



















