ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಬಹುದೊಡ್ಡ ಆಸರೆಯಾಗಿದೆ. ಖಾಸಗಿ ಉದ್ಯೋಗಿಗಳಿಗೆ ಉಳಿತಾಯ, ಹೂಡಿಕೆ ಹಾಗೂ ನಿವೃತ್ತಿ ಬಳಿಕ ಪಿಂಚಣಿ ಪಡೆಯಲು ಇಪಿಎಫ್ಒ ಕೊಡುಗೆ ನಿರ್ಣಾಯಕವಾಗಿದೆ. ಇದರ ಮಧ್ಯೆಯೇ, ಇಪಿಎಫ್ಒ ನಿಯಮದಲ್ಲಿ ಇತ್ತೀಚೆಗೆ ಭಾರಿ ಬದಲಾವಣೆ ತರಲಾಗಿದೆ. ಅದರಲ್ಲೂ, ಒಬ್ಬ ಉದ್ಯೋಗಿಯು ಒಂದು ತಿಂಗಳು ಕೆಲಸ ಮಾಡಿದರೂ ಆತನಿಗೆ ಪಿಂಚಣಿ ಪಾಲು ನೀಡಬೇಕು ಎಂಬುದು ಹೊಸ ನಿಯಮವಾಗಿದೆ.
ಹೌದು, ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಯಾವುದೇ ಒಬ್ಬ ಉದ್ಯೋಗಿಯು ಒಂದೇ ತಿಂಗಳು ಕೆಲಸ ಮಾಡಿದರೂ, ಆತನಿಗೆ ಪಿಂಚಣಿಯ ಮೊತ್ತವನ್ನು ನೀಡಬೇಕು ಎಂದು ಹೊಸ ನಿಯಮ ತಿಳಿಸಿದೆ. ಇದುವರೆಗೆ, ಒಬ್ಬ ಉದ್ಯೋಗಿಯು ಆರು ತಿಂಗಳು ಕೆಲಸ ಮಾಡಿ, ಬಳಿಕ ರಾಜೀನಾಮೆ ನೀಡಿದರೂ ಪಿಂಚಣಿ ಮೊತ್ತ ಸಿಗುತ್ತಿರಲಿಲ್ಲ.
ಆರು ತಿಂಗಳು ಕೆಲಸ ಮಾಡಿ ಉದ್ಯೋಗ ತೊರೆದರೆ, ಪಿಂಚಣಿ ಅಂಶವು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲ್ಪಡುತ್ತಿತ್ತು. ಹೀಗಾಗಿ, ಉದ್ಯೋಗಿ ಐದು ತಿಂಗಳ ನಂತರ ಕೆಲಸ ಬಿಟ್ಟರೆ, ಅವನು ತನ್ನ ಪಿಂಚಣಿ ಪಾಲನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಕೇವಲ ಪಿಎಫ್ ಮೊತ್ತ ಮಾತ್ರ ಉದ್ಯೋಗಿಗೆ ಸಿಗುತ್ತಿತ್ತು. ಈಗ ಈ ನಿಯಮವನ್ನು ಬದಲಾಯಿಸಲಾಗಿದೆ.
ಹಿಂದಿನ ನಿಯಮವನ್ನು ಉದ್ಯೋಗಿಗಳಿಗೆ ಅನ್ಯಾಯವೆಂದು ಪರಿಗಣಿಸಲಾಗಿತ್ತು. ವಿಶೇಷವಾಗಿ ವೈಯಕ್ತಿಕ, ಆರೋಗ್ಯ ಅಥವಾ ತರಬೇತಿ ಸಂಬಂಧಿತ ಕಾರಣಗಳಿಂದ ಕೆಲಸ ತೊರೆದವರಿಗೆ ಇದರಿಂದ ನಷ್ಟವಾಗುತ್ತಿತ್ತು. ಈಗ, ಉದ್ಯೋಗಿ ಒಂದು ತಿಂಗಳ ನಂತರ ರಾಜೀನಾಮೆ ನೀಡಿದರೂ ಫಾರ್ಮ್ 10C ಮೂಲಕ ಇಪಿಎಸ್ ಮೊತ್ತವನ್ನು ಪಡೆಯಬಹುದು.
ಸೇವೆಗೆ ಸೇರಿದ ಆರು ತಿಂಗಳೊಳಗೆ ರಾಜೀನಾಮೆ ನೀಡುವ ಉದ್ಯೋಗಿಗಳು ತಮ್ಮ ಇಪಿಎಸ್ ಕೊಡುಗೆಗಳ ಬಗ್ಗೆ ತಿಳಿಯಲು ತಮ್ಮ ಪಿಎಫ್ ಪಾಸ್ಬುಕ್ ಅನ್ನು ಪರಿಶೀಲಿಸಬೇಕು. ನಂತರ ಇಪಿಎಫ್ಒಗೆ ದೂರು ನೀಡಿ ಪಿಂಚಣಿ ಮೊತ್ತವನ್ನು ಪಡೆಯಬಹುದಾಗಿದೆ.