ಬೆಂಗಳೂರು: ಖಾಸಗಿ ಕಂಪನಿಗಳ ಉದ್ಯೋಗಿಗಳು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಸದಸ್ಯರಾಗಿದ್ದರೆ, ಅವರಿಗೆ ನಿವೃತ್ತಿ ಬಳಿಕ ಪಿಂಚಣಿ ದೊರೆಯುತ್ತದೆ. ಈಗ ಇಪಿಎಫ್ಒ ಸದಸ್ಯರ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಏರಿಕೆಯಾಗಿದೆ. ಆದಾಗ್ಯೂ, 60 ವರ್ಷಕ್ಕಿಂತ ಮೊದಲು ಕೂಡ ಮಾಸಿಕ ಪಿಂಚಣಿಯನ್ನು ಪಡೆಯಬಹುದಾಗಿದೆ. ಆದರೆ, ಇದಕ್ಕೆ ಕೆಲವು ನಿಯಮಗಳು ಇವೆ. ಅವುಗಳು ಯಾವವು? ತಿಳಿಯೋಣ ಬನ್ನಿ.
ಹೌದು, ಖಾಸಗಿ ಸಂಸ್ಥೆಯಲ್ಲಿ 10 ವರ್ಷ ಕೆಲಸ ಮಾಡಿದ ಇಪಿಎಫ್ಒ ಸದಸ್ಯರು ಮಾಸಿಕ ಪಿಂಚಣಿಗೆ ಅರ್ಹರಾಗುತ್ತಾರೆ. ಉದ್ಯೋಗದಲ್ಲಿ 10 ವರ್ಷ ಪೂರ್ಣಗೊಳ್ಳುವ ಮೊದಲು ಕೆಲಸ ತೊರೆದರೆ ಮಾಸಿಕ ಪಿಂಚಣಿಗೆ ಅರ್ಹರಾಗಿರುವುದಿಲ್ಲ. ಅವರಿಗೆ 58 ವರ್ಷವಾದ ಬಳಿಕ ಮಾಸಿಕ ಪಿಂಚಣಿ ದೊರೆಯುತ್ತದೆ. ಉದ್ಯೋಗಿಗೆ 50 ವರ್ಷ ತುಂಬಿದ ಬಳಿಕವೂ ಪಿಂಚಣಿ ಪಡೆಯಬಹುದಾಗಿದೆ.
ಉದ್ಯೋಗಿಯ ವಯಸ್ಸು 50ರಿಂದ 57 ವರ್ಷದೊಳಗೆ ಇದ್ದಾಗಲೂ ಮಾಸಿಕ ಪಿಂಚಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, 58 ವರ್ಷ ತುಂಬಿದ ಬಳಿಕ ಸಿಗುವ ಪಿಂಚಣಿಯಲ್ಲಿ ಶೇ.4ರಷ್ಟು ಕಡಿಮೆ ಮೊತ್ತವನ್ನು 50ರಿಂದ 57 ವರ್ಷದಲ್ಲಿ ನೀಡಲಾಗುತ್ತದೆ. ಅದೇ 60 ವರ್ಷ ತುಂಬಿದ ಬಳಿಕ ಪಿಂಚಣಿ ಪಡೆಯಲು ಮುಂದಾದರೆ, 58 ವರ್ಷದಲ್ಲಿ ನೀಡುವ ಪಿಂಚಣಿಗಿಂತ ಶೇ.4ರಷ್ಟು ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ.
ಮಾಸಿಕ ಪಿಂಚಣಿಯ ಲೆಕ್ಕಾಚಾರವನ್ನು ಗಮನಿಸೋಣ. ಒಬ್ಬ ಉದ್ಯೋಗಿಯ ಮೂಲ ವೇತನದ ಮಿತಿ 15 ಸಾವಿರ ರೂಪಾಯಿ ಇದ್ದು, ಅವರ ಸೇವಾ ಅವಧಿ 10 ವರ್ಷ ಪೂರ್ಣಗೊಂಡಿದೆ ಎಂದು ಭಾವಿಸೋಣ. ಅವರಿಗೆ 58 ವರ್ಷ ತುಂಬಿದ ಬಳಿಕ ಮಾಸಿಕ 2,143 ರೂಪಾಯಿ ಪಿಂಚಣಿ ದೊರೆಯುತ್ತದೆ. ಆದಾಗ್ಯೂ, ಪಿಂಚಣಿಯ ಮೊತ್ತವನ್ನು ಏರಿಸಬೇಕು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ: ಬೆಲೆ ಏರಿಕೆ ಬಿಸಿ : 2026ರಲ್ಲಿ ಸ್ಮಾರ್ಟ್‌ಫೋನ್ ಬೆಲೆ ಶೇ. 6.9ರಷ್ಟು ಹೆಚ್ಚಳ ಸಾಧ್ಯತೆ


















