ಬೆಂಗಳೂರು: ಕೇಂದ್ರ ಸರ್ಕಾರವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್ಒ) ಹತ್ತಾರು ಬದಲಾವಣೆಗಳನ್ನು ಮಾಡುತ್ತಿದೆ. ಅದರಲ್ಲೂ, ಪಿಎಫ್ ಖಾತೆದಾರರು ಆನ್ ಲೈನ್ ಮೂಲಕ ಹಣ ವಿತ್ ಡ್ರಾ ಮಾಡುವ ಜತೆಗೆ ಎಟಿಎಂ, ಯುಪಿಐ ಮೂಲಕ ಹಣ ಡ್ರಾ ಮಾಡುವ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪಿಎಫ್ ವಿತ್ ಡ್ರಾ ಮಾಡುವ ಹಣದ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಲು ತೀರ್ಮಾನಿಸಿದೆ ಎಂದು ವರದಿಯೊಂದು ತಿಳಿಸಿದೆ.
ಕೇಂದ್ರ ಸರ್ಕಾರವು ಇಪಿಎಫ್ಒ ಮೂಲಕ ಪಿಎಫ್ ಹಣ ಪಡೆಯುವ ನಿಯಮಗಳನ್ನು ಈಗಾಗಲೇ ಸಡಿಲಗೊಳಿಸಿದೆ. ಈ ಮೂಲಕ ಮುಂಗಡ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ ಇದ್ದ 1 ಲಕ್ಷ ರೂ. ವಿತ್ ಡ್ರಾ ಮಿತಿಯನ್ನು ಈಗ 5 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಗೊಂದು ವೇಳೆ, ಅಂತಿಮವಾಗಿ ಅನುಮೋದನೆ ದೊರೆತರೆ, ಇನ್ನು ಮುಂದೆ ಖಾತೆದಾರರು 5 ಲಕ್ಷ ರೂಪಾಯಿವರೆಗೆ ಆಟೋ ಸೆಟಲ್ ಮೆಂಟ್ ಆಫ್ ದಿ ಅಡ್ವಾನ್ಸ್ (ಎಎಸ್ಎಸಿ) ಮೂಲಕ ವಿತ್ ಡ್ರಾ ಮಾಡಬಹುದು. ಮದುವೆ, ಮನೆ ಖರೀದಿ, ಮಕ್ಕಳ ಉನ್ನತ ಶಿಕ್ಷಣ ಸೇರಿ ಹಲವು ಕಾರಣಗಳಿಗಾಗಿ ಪಿಎಫ್ ಹಣವನ್ನು ವಿನಿಯೋಗಿಸಬಹುದಾಗಿದೆ.
2020ರ ಏಪ್ರಿಲ್ 20ರಂದು ಆಟೋ ಕ್ಲೇಮ್ ಸೆಟಲ್ ಮೆಂಟ್ ಸೌಲಭ್ಯವನ್ನು ಇಪಿಎಫ್ಒ ಪರಿಚಯಿಸಿತು. ಆಗ ಕೇವಲ 50 ಸಾವಿರ ರೂಪಾಯಿವರೆಗೆ ವಿತ್ ಡ್ರಾ ಮಾಡಲು ಅವಕಾಶವಿತ್ತು. ಆದರೆ, 2024ರ ಮೇ ತಿಂಗಳಲ್ಲಿ ಈ ಮೊತ್ತವನ್ನು 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಯಿತು. ಮೊದಲು ಕೇವಲ ಅನಾರೋಗ್ಯ ಅಥವಾ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಾತ್ರ ಪಿಎಫ್ ಹಣವನ್ನು ಪಡೆಯಲು ಸಾಧ್ಯವಿತ್ತು. ಆದರೆ ಈಗ ಶಿಕ್ಷಣ, ಮದುವೆ ಮತ್ತು ಮನೆ ಖರೀದಿಗೂ ಹಣವನ್ನು ವಿತ್ ಡ್ರಾ ಮಾಡುವ ಸೌಲಭ್ಯ ನೀಡಲಾಗಿದೆ.