ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಪಿಎಫ್ ವಿತ್ ಡ್ರಾಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಸಡಿಲಗೊಳಿಸಿತ್ತು. ಹಾಗೆಯೇ, ಇಪಿಎಫ್ಒ ಸದಸ್ಯರು ಕೆಲಸ ಬಿಟ್ಟ ನಂತರ ಶೇ.100ರಷ್ಟು ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕೆಲಸ ಬಿಟ್ಟು 12 ತಿಂಗಳ ಬಳಿಕ ಶೇ.100ರಷ್ಟು ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಲು ಅವಕಾಶ ಎಂದು ತಿಳಿಸಿತ್ತು. ಇದರಿಂದಾಗಿ ಇಪಿಎಫ್ಒ ಸದಸ್ಯರಲ್ಲಿ ಗೊಂದಲ ಮೂಡಿತ್ತು. ಈಗ ಗೊಂದಲಕ್ಕೆ ಇಪಿಎಫ್ಒ ತೆರೆ ಎಳೆದಿದೆ.
ಹೌದು, ಇಪಿಎಫ್ಒ ನೀಡಿದ ಹೊಸ ಮಾಹಿತಿ ಪ್ರಕಾರ, ಯಾವುದೇ ಉದ್ಯೋಗಿಯು ಕೆಲಸ ತೊರೆದ ಬಳಿಕ ಅಥವಾ ಆತನನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ, ಪಿಎಫ್ ಖಾತೆಯಲ್ಲಿರುವ ಶೇ.75ರಷ್ಟು ಮೊತ್ತವನ್ನು ಕೂಡಲೇ ವಿತ್ ಡ್ರಾ ಮಾಡಬಹುದಾಗಿದೆ. ಆತನಿಗೆ ಒಂದು ವರ್ಷದವರೆಗೆ ಕೆಲಸ ಸಿಗದಿದ್ದರೆ, 12 ತಿಂಗಳ ಬಳಿಕ ಶೇ.100ರಷ್ಟು ಹಣ ವಿತ್ ಡ್ರಾ ಮಾಡಬಹುದಾಗಿದೆ ಎಂದು ಇಪಿಎಫ್ಒ ತಿಳಿಸಿದೆ. ಇದಾದ ಬಳಿಕ ಖಾಸಗಿ ಉದ್ಯೋಗಿಗಳು ನಿರಾಳರಾಗಿದ್ದಾರೆ.
ಖಾತೆಯಲ್ಲಿರುವ ಶೇ.100ರಷ್ಟು ಹಣ ವಿತ್ ಡ್ರಾ ಜತೆಗೆ ಕೆಲವು ನಿಯಮಗಳನ್ನೂ ಸರಳಗೊಳಿಸಲಾಗಿದೆ. ಇದುವರೆಗೆ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಹಲವು ಕಾರಣಗಳಿಗೆ ಸಂಬಂಧಿಸಿದ ನಿಯಮಗಳಿದ್ದವು. ಇಂತಹ 13 ನಿಯಮಗಳನ್ನು ಈಗ ಸುಲಭಗೊಳಿಸಲಾಗಿದೆ. 13 ಸಂಕೀರ್ಣ ನಿಯಮಗಳ ಬದಲಾಗಿ, ‘ಅತ್ಯವಶ್ಯಕ ಅಗತ್ಯಗಳು’ (ಅನಾರೋಗ್ಯ, ಶಿಕ್ಷಣ, ಮದುವೆ), ‘ವಸತಿ ಅಗತ್ಯಗಳು’ ಮತ್ತು ‘ವಿಶೇಷ ಸಂದರ್ಭಗಳು’ ಎಂಬ ಮೂರು ವರ್ಗಗಗಳಾಗಿ ವಿಂಗಡಿಸಲಾಗಿದೆ.
ಇವುಗಳಷ್ಟೇ ಅಲ್ಲ, ಪಿಎಫ್ ವಿತ್ ಡ್ರಾ ಮಾಡುವ ಮಿತಿಗಳನ್ನು ಕೂಡ ಹೆಚ್ಚಿಸಲಾಗಿದೆ. ಈಗ ಶಿಕ್ಷಣ ಉದ್ದೇಶಕ್ಕೆ 10 ಬಾರಿ ಪಿಎಫ್ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ. ಮದುವೆ ಸೇರಿ ವಿವಿಧ ಕಾರಣ ನೀಡಿ 5 ಬಾರಿ ಹಣ ವಾಪಸ್ ಪಡೆಯಬಹುದು. ಇದಕ್ಕೂ ಮೊದಲು 3 ಬಾರಿ ಮಾತ್ರ ಪಿಎಫ್ ವಿತ್ ಡ್ರಾ ಮಾಡಲು ಅವಕಾಶವಿತ್ತು. ಕೆಲವೇ ತಿಂಗಳಲ್ಲಿ ಎಟಿಎಂ ಮೂಲಕ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆಯನ್ನೂ ಜಾರಿಗೊಳಿಸಲು ಇಪಿಎಫ್ಒ ನಿರ್ಧರಿಸಿದೆ.



















