ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಇತ್ತೀಚೆಗೆ ಹತ್ತಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಪಿಎಫ್ ಸದಸ್ಯರು ಕಚೇರಿಗಳಿಗೆ ಅಲೆದಾಡುವ ತಲೆನೋವು ಇಲ್ಲದೆ, ಆನ್ ಲೈನ್ ಮೂಲಕವೇ ಪಿಎಫ್ ಹಣ ವಿತ್ ಡ್ರಾ ಮಾಡುವುದು, ವಿವಿಧ ಖಾತೆಗಳ ಮೊತ್ತವನ್ನು ಒಂದೇ ಖಾತೆಗೆ ವರ್ಗಾಯಿಸುವುದು, ದಾಖಲೆ, ಮಾಹಿತಿ ಬದಲಾವಣೆ ಸೇರಿ ಹಲವು ಸುಧಾರಣೆ ಜಾರಿಗೆ ತಂದಿದೆ. ಆದರೆ, ಇದರ ಬೆನ್ನಲ್ಲೇ, ಇಪಿಎಫ್ಒ 8 ಕೋಟಿ ಪಿಎಫ್ ಸದಸ್ಯರಿಗೆ ಶಾಕಿಂಗ್ ನ್ಯೂಸ್ ನೀಡಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಹೌದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ, 2025-26ನೇ ಹಣಕಾಸು ವರ್ಷದಲ್ಲಿ ಇಪಿಎಫ್ಒ ಸದಸ್ಯರಿಗೆ ನೀಡುವ ಬಡ್ಡಿದರದಲ್ಲಿ ಕಡಿತ ಮಾಡಲು ಇಪಿಎಫ್ಒ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ ತಿಂಗಳಲ್ಲಿ ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆ ನಡೆಯಲಿದೆ. ಬಡ್ಡಿದರ ಕಡಿತದ ಕುರಿತು ಸಭೆಯಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಿಎಫ್ ಸದಸ್ಯರಿಗೆ ಕೇಂದ್ರ ಸರ್ಕಾರವು ಈಗ ವಾರ್ಷಿಕ ಶೇ.8.25ರಷ್ಟು ಬಡ್ಡಿ ನೀಡುತ್ತಿದೆ. ಪಿಎಫ್ ಸದಸ್ಯರ ಮೊತ್ತದ ಆಧಾರದ ಮೇಲೆ ಬಡ್ಡಿಯ ಲಾಭವಾಗುತ್ತದೆ. 2024-25ರಲ್ಲಿ ಶೇ.8.25ರಷ್ಟು ಬಡ್ಡಿದರ ನೀಡಲಾಗಿದೆ. ಆದರೆ, ಇದನ್ನು ಕೇಂದ್ರ ಸರ್ಕಾರವು ಶೇ.8ಕ್ಕೆ ಇಳಿಕೆ ಮಾಡಲಿದೆ ಎಂದು ಹೇಳಲಾಗುತ್ತದೆ. ಹಾಗೇನಾದರೂ, ಬಡ್ಡಿದರ ಇಳಿಸಿದರೆ ಪಿಎಫ್ ಸದಸ್ಯರ ಬಡ್ಡಿ ಲಾಭದಲ್ಲಿ ಇಳಿಕೆಯಾಗಲಿದೆ.
ಕೇಂದ್ರ ಸರ್ಕಾರವು 2023-24ನೇ ಹಣಕಾಸು ವರ್ಷದಿಂದಲೂ ಶೇ.8.25ರಷ್ಟು ಬಡ್ಡಿಯನ್ನೇ ನೀಡುತ್ತಿದೆ. ಹಾಗಾಗಿ, ಈ ಬಾರಿಯಾದರೂ ಕೇಂದ್ರ ಸರ್ಕಾರವು ಬಡ್ಡಿ ಏರಿಕೆ ಮಾಡಲಿದೆ ಎಂಬ ನಿರೀಕ್ಷೆಯು 8 ಕೋಟಿ ಸದಸ್ಯರಿಗೆ ಇತ್ತು. ಈಗಿನ ವರದಿಗಳನ್ನು ಗಮನಿಸಿದರೆ, ಸದಸ್ಯರಿಗೆ ಕಹಿ ಸುದ್ದಿ ಕಾದಿದೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಏರ್ ಕ್ವಾಲಿಟಿ ದಿಢೀರ್ ಸುಧಾರಣೆ ; ಮಂಗಳೂರು, ಬಳ್ಳಾರಿ, ಶಿವಮೊಗ್ಗದಲ್ಲಿ ಆತಂಕ



















