ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಪಿಎಫ್ ಮೊತ್ತವನ್ನು ಉದ್ಯೋಗಿಗಳು ನಿವೃತ್ತರಾದ ಬಳಿಕ ನೀಡಲಾಗುತ್ತದೆ. ಆದರೆ, ಕೆಲವು ತುರ್ತು ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಪಿಎಫ್ ನ ಒಟ್ಟು ಮೊತ್ತದಲ್ಲಿ ಒಂದಷ್ಟು ಭಾಗವನ್ನು ವಿತ್ ಡ್ರಾ ಮಾಡಬಹುದಾಗಿದೆ. ಆದರೆ, ಹೀಗೆ ಅಗತ್ಯ ಸಂದರ್ಭಗಳಲ್ಲಿ ಹಣ ವಿತ್ ಡ್ರಾ ಮಾಡುವಾಗ ಸುಳ್ಳು ಕಾರಣ ನೀಡುವಂತಿಲ್ಲ ಎಂಬ ನಿಯಮ ಜಾರಿಗೆ ತರಲು ಇಪಿಎಫ್ಒ ಮುಂದಾಗಿದೆ.
ಹೌದು, ತುರ್ತು ಸಂದರ್ಭಗಳನ್ನು ಉಲ್ಲೇಖಿಸಿ ಇಪಿಎಫ್ ಸದಸ್ಯರು ಪಿಎಫ್ ಹಣವನ್ನು ವಿತ್ ಡ್ರಾ ಮಾಡುವಾಗ ನಿಖರ ಕಾರಣ ನೀಡಬೇಕು. ನೀವು ಮನೆ ಖರೀದಿಸಲು ಹಣ ಹಿಂಪಡೆಯುತ್ತಿದ್ದೀರೋ, ಮದುವೆ, ಶಿಕ್ಷಣ, ಅನಾರೋಗ್ಯದ ಹಿನ್ನೆಲೆಯಲ್ಲಿ ಹಣ ಹಿಂಪಡೆಯುತ್ತಿದ್ದೀರೋ ಎಂಬುದಕ್ಕೆ ನಿಜವಾದ ಕಾರಣ ನೀಡಬೇಕಾಗುತ್ತದೆ.
ಯಾವ ಕಾರಣಕ್ಕಾಗಿ ಹಣ ವಿತ್ ಡ್ರಾ ಮಾಡಲಾಗುತ್ತಿದೆ ಎಂಬುದಕ್ಕೆ ನಿಖರ ಕಾರಣ ಹಾಗೂ ದಾಖಲೆ ಒದಗಿಸಬೇಕು. ಹಾಗೊಂದು ವೇಳೆ, ಸುಳ್ಳು ಕಾರಣ ನೀಡಿ ಹಣ ವಿತ್ ಡ್ರಾ ಮಾಡಿದ್ದರೆ, ಆ ಮೊತ್ತವನ್ನು ವಾಪಸ್ ಪಡೆಯಲಾಗುತ್ತದೆ. ಈ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
“ಯಾವಾಗ ಎಷ್ಟು ವಿತ್ ಡ್ರಾ ಸಾಧ್ಯ”?
- ಮದುವೆ ಸಮಯದಲ್ಲಾದರೆ ಪಿಎಫ್ ನ ಒಟ್ಟು ಮೊತ್ತದ ಶೇ.50ರಷ್ಟು ಹಣ ವಿತ್ ಡ್ರಾ ಮಾಡಬಹುದು.
- ಮನೆ ಖರೀದಿ ಕಾರಣ ನೀಡಿದರೆ ಶೇ.90ರಷ್ಟು ಹಣ ವಿತ್ ಡ್ರಾ ಮಾಡಬಹುದು
- ಶಿಕ್ಷಣದ ಉದ್ದೇಶಳಿಗೆ ಶೇ.50ರಷ್ಟು ಮೊತ್ತವನ್ನು ಹಿಂಪಡೆಯಬಹುದು
- ಗಂಭೀರ ಅನಾರೋಗ್ಯ ಉಂಟಾದರೆ ಪಿಎಫ್ ಗೆ ಉದ್ಯೋಗಿಯಿಂದ ಕಡಿತವಾದ ಹಣ ಅಥವಾ ಆರು ತಿಂಗಳ ಬೇಸಿಕ್ ಸಂಬಳದ ಮೊತ್ತ