ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ತನ್ನ 7 ಕೋಟಿಗೂ ಅಧಿಕ ಸದಸ್ಯರಿಗೆ ಗುಡ್ ನ್ಯೂಸ್ ನೀಡಿದೆ. ಇಪಿಎಫ್ಒ 3.0 ಅಡಿಯಲ್ಲಿ ಎಟಿಎಂ ಹಾಗೂ ಯುಪಿಐ ಮೂಲಕ ಪಿಎಫ್ ಮೊತ್ತ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗುತ್ತಿದೆ. ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇದಿಷ್ಟೇ ಅಲ್ಲ, ಪಿಎಫ್ ವಿತ್ ಡ್ರಾ ಮಿತಿಯನ್ನೂ ಏರಿಕೆ ಮಾಡಲಾಗುತ್ತಿರುವುದು ಸದಸ್ಯರಿಗೆ ಭಾರಿ ಅನುಕೂಲವಾಗಲಿದೆ.
ಹೌದು, ಪಿಎಫ್ ಮೊತ್ತವನ್ನು ಆಟೋ ಸೆಟಲ್ ಮೆಂಟ್ ಮೂಲಕ ವಿತ್ ಡ್ರಾ ಮಾಡುವ ಮಿತಿಯನ್ನು ಈಗ 5 ಲಕ್ಷ ರೂ.ಗೆ ಏರಿಸಲಾಗುತ್ತಿದೆ. ಈ ಮೊದಲು ಆಟೋ ಸೆಟಲ್ ಮೆಂಟ್ ಮಿತಿ ಕೇವಲ 1 ಲಕ್ಷ ರೂಪಾಯಿ ಇತ್ತು. ಆದರೆ ಈಗ ಕೇಂದ್ರ ಸರ್ಕಾರ ಇದನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಿದೆ. ಅಂದರೆ, ನಿಮ್ಮ ಕ್ಲೈಮ್ ಮೊತ್ತ 5 ಲಕ್ಷದವರೆಗೆ ಇದ್ದರೆ, ಸಾಫ್ಟ್ವೇರ್ ಮೂಲಕವೇ ಹಣ ಬಿಡುಗಡೆಯಾಗುತ್ತದೆ.
ಮೊದಲೆಲ್ಲಾ ಕ್ಲೈಮ್ ಸೆಟಲ್ ಆಗಲು 15-20 ದಿನಗಳು ಬೇಕಾಗುತ್ತಿತ್ತು. ಈಗ ಈ ಆಟೋ ಮೋಡ್ ಮೂಲಕ ಕೇವಲ 3 ರಿಂದ 4 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುವ ಅಗತ್ಯವಿಲ್ಲದ ಕಾರಣ ಪ್ರಕ್ರಿಯೆ ಸರಳವಾಗಿದೆ. ವಿಶೇಷವಾಗಿ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಇದು ತುಂಬ ಸಹಕಾರಿಯಾಗಿದೆ.
ಗಮನಿಸಬೇಕಾದ ಅಂಶಗಳು
• ಕೆವೈಸಿ ಪೂರ್ಣಗೊಂಡಿರಬೇಕು: ನಿಮ್ಮ UAN ಗೆ ಆಧಾರ್, ಪಾನ್ (PAN) ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಸರಿಯಾಗಿ ಲಿಂಕ್ ಆಗಿರಬೇಕು.
• ಬ್ಯಾಂಕ್ ವಿವರ: ನಿಮ್ಮ ಬ್ಯಾಂಕ್ ಖಾತೆಯ IFSC ಕೋಡ್ ಅಪ್ಡೇಟ್ ಆಗಿರಬೇಕು.
• ಸಕ್ರಿಯ ಮೊಬೈಲ್ ಸಂಖ್ಯೆ: ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇರಬೇಕು (OTP ಗಾಗಿ).
• ನಿಮ್ಮ ಕ್ಲೈಮ್ ಮೊತ್ತ 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅಥವಾ ನಿಮ್ಮ ಕೆವೈಸಿ (KYC) ಸರಿಯಿಲ್ಲದಿದ್ದರೆ, ಅಂತಹ ಅರ್ಜಿಗಳನ್ನು ಅಧಿಕಾರಿಗಳು ಮ್ಯಾನುವಲ್ ಆಗಿ ಪರಿಶೀಲಿಸುತ್ತಾರೆ.
ಇದನ್ನೂ ಓದಿ: ಐಕ್ಯೂ 16 ಅಬ್ಬರ : 2nm ಪ್ರೊಸೆಸರ್ ಮತ್ತು 185Hz ಡಿಸ್‌ಪ್ಲೇಯೊಂದಿಗೆ ಬರಲಿದೆ ಹೊಸ ಫ್ಲ್ಯಾಗ್‌ಶಿಪ್ ಫೋನ್



















