ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ. ನಂತರ ಜಾರಿ ನಿರ್ದೇಶನಾಲಯದಲ್ಲೂ ದೂರು ದಾಖಲಾಗಿತ್ತು.
ಸದ್ಯ ಲೋಕಾಯುಕ್ತದಲ್ಲಿ ದಾಖಲಾದ ಎಫ್ ಐಆರ್ ಆಧರಿಸಿ ಇದೀಗ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇಡಿ ಸಂಸ್ಥೆಯಿಂದ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ದಾಖಲಿಸಿಕೊಳ್ಳಲಾಗಿದೆ.
ಲೋಕಾಯುಕ್ತ ಎಫ್ ಐಆರ್ ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಇ.ಡಿ (Enforcement Directorate) ಇಸಿಐಆರ್ ದಾಖಲಿಸಿದೆ. ಕೇಂದ್ರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣದಲ್ಲೂ ಸಿಎಂ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1 (ಎ1 ಆರೋಪಿ) ಆಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್ ನಲ್ಲಿ ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಜಾರಿ ನಿರ್ದೇಶನಾಲಯದ ಕೇಸಿನಲ್ಲಿ ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಂತೆ ಪ್ರಕರಣ ದಾಖಲಾಗಿದೆ. PMLA ಕಾಯ್ದೆಯಡಿ ECIR ದಾಖಲಾಗಿದ್ದು, ಈ ECIR ಪೊಲೀಸರ FIRಗೆ ಸರಿ ಸಮಾನವಾಗಿದೆ. ಇದರಲ್ಲಿ ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ಇಡಿಗಿದೆ. ತನಿಖೆ ಹಂತದಲ್ಲಿ ಆಸ್ತಿಗಳನ್ನು ಸೀಜ್ ಮಾಡುವ ಅಧಿಕಾರವೂ ಇರುತ್ತದೆ.
ಇಡಿ ಪ್ರಕರಣದ ನಾಲ್ವರು ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಬಹುದು. ಆರೋಪಿಗಳ ಮನೆಯ ಮೇಲೆ ದಾಳಿ ಮಾಡಲಿದೆ. ಕೊನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳ ಬಂಧನವಾದರೂ ಅಚ್ಚರಿಪಡಬೇಕಿಲ್ಲ.