ಬೆಂಗಳೂರು: ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಬಿಎಂಎಸ್ ಎಜುಕೇಶನ್ ಟ್ರಸ್ಟ್‌ಗೆ ಸಂಬಂಧಿಸಿದ 19.46 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಲ್ಲದೆ ರಾಜ್ಯದಲ್ಲಿ 2021–22ರಲ್ಲಿ ನಡೆದ 545 ಪಿಎಸ್‌ಐಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಇಡಿ 1.53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದೂರು ನೀಡಿದ್ದು, ಮಲ್ಲೇಶ್ವರಂ ಹಾಗೂ ಹನುಮಂತನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರತ್ಯೇಕವಾಗಿ ಕೇಸ್ ದಾಖಲಿಸಿಕೊಂಡ ಇಡಿ ತನಿಖೆ ಆರಂಭಿಸಿತ್ತು. 2025ರಲ್ಲಿ ಬಿಎಂಎಸ್ ಟ್ರಸ್ಟ್ ಸದಸ್ಯರು, ಇಂಜಿನಿಯರಿಂಗ್ ಕಾಲೇಜುಗಳು, ಮಧ್ಯವರ್ತಿಗಳು ಹಾಗೂ ಏಜೆಂಟರ ಮನೆಗಳು ಸೇರಿ 18 ಸ್ಥಳಗಳಲ್ಲಿ ಇಡಿ ದಾಳಿ ನಡೆಸಲಾಗಿತ್ತು.
ತನಿಖೆಯಲ್ಲಿ ಬಿಎಂಎಸ್ ಟ್ರಸ್ಟ್‌ನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ನಡೆಯುತ್ತಿರುವುದು ಪತ್ತೆಯಾಗಿದೆ. ಕಾಲೇಜು ಆಡಳಿತ ಮಂಡಳಿ ಮಧ್ಯವರ್ತಿಗಳು ಹಾಗೂ ಏಜೆಂಟರ ಮೂಲಕ ವಿದ್ಯಾರ್ಥಿಗಳಿಂದ ನೇರವಾಗಿ ಮತ್ತು ಶೈಕ್ಷಣಿಕ ಸಲಹೆಗಾರರ ಮೂಲಕ ಹಣ ಸಂಗ್ರಹಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಈ ಹಣವನ್ನು ಟ್ರಸ್ಟ್‌ನ ಲೆಕ್ಕಪತ್ರಗಳಲ್ಲಿ ದಾಖಲಿಸದೆ, ಸೀಟ್‌ಗಳನ್ನು ನಿಗದಿತ ಶುಲ್ಕಕ್ಕಿಂತ 10 ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಈ ಅಕ್ರಮದಿಂದ ಸುಮಾರು 20 ಕೋಟಿ ರೂ. ಸಂಗ್ರಹದ ಸಾಕ್ಷ್ಯ ದೊರೆತಿದ್ದು, ದಾಳಿ ವೇಳೆ 1.86 ಕೋಟಿ ರೂ. ನಗದುಕೂಡ ಪತ್ತೆಯಾಗಿತ್ತು. ಅಕ್ರಮ ಹಣವನ್ನು ಟ್ರಸ್ಟಿಗಳು ವೈಯಕ್ತಿಕ ಲಾಭಕ್ಕಾಗಿ ಬಳಸಿ ಆಸ್ತಿ ಖರೀದಿಸಿದ್ದರಿಂದ 19.46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಇದೀಗ ಮುಟ್ಟುಗೋಲು ಹಾಕಿಕೊಂಡಿದೆ.
ಇದನ್ನೂ ಓದಿ: ಲೀಸ್‌ಗೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ 5 ಲಕ್ಷ ವಂಚನೆ | ಆರೋಪಿ ವಿರುದ್ದ FIR ದಾಖಲು



















