ಬೆಂಗಳೂರು: ಅದೊಂದು ಕಾಲ ಇತ್ತು. ಎಂಜಿನಿಯರಿಂಗ್ ಸೀಟು ಸಿಕ್ಕಿದೆ ಅಂದರೂ ಆತನಿಗೆ ಉದ್ಯೋಗ ಖಾತ್ರಿ ಎಂದು ಜನ ಭಾವಿಸುತ್ತಿದ್ದರು. ಎಂಜಿನಿಯರಿಂಗ್ ಮುಗಿಸಿದ ತಕ್ಷಣ ಕಂಪನಿಗಳು ಕರೆದು ಉದ್ಯೋಗ ನೀಡುತ್ತಿದ್ದವು. ಕೈತುಂಬ ಸಂಬಳವನ್ನೂ ಕೊಡುತ್ತಿದ್ದವು. ಇನ್ನು, ಹುಡುಗ ಎಂಜಿನಿಯರಿಂಗ್ ಪಾಸಾಗಿದ್ದಾನೆ, ಕೆಲಸ ಮಾಡುತ್ತಿದ್ದಾನೆ ಎಂದು ಹೆಣ್ಣು ಕೊಡಲು ಪೋಷಕರು ಮುಂದೆ ಬರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಎಂಜಿನಿಯರಿಂಗ್ ಮುಗಿಸಿದ ಶೇ.83ರಷ್ಟು ಜನಕ್ಕೆ ಉದ್ಯೋಗವೇ ಸಿಕ್ಕಿಲ್ಲ ಎಂಬ ವರದಿ ಹೆಚ್ಚಿನ ಜನರನ್ನು ಭಯಕ್ಕೆ ದೂಡಿದೆ.
ಹೌದು, 2024ರಲ್ಲಿ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ 83% ಜನರಿಗೆ ಸರಿಯಾದ ನೌಕರಿ ಸಿಗದೆ ಹೋಗಿದೆ. ಕೆಲವರಿಗೆ ಇಂಟರ್ನ್ ಶಿಪ್ ಅವಕಾಶಗಳು ಕೂಡ ದೊರಕಿಲ್ಲ. ಇದು ಯುವಜನರ ಕನಸುಗಳನ್ನು ಧೂಳಿಗೆ ಬೀಸುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಟೋಮೇಷನ್ ತಂತ್ರಜ್ಞಾನಗಳು ಕಾರ್ಯಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಹಿಂದೆ ಮಾನವ ಶ್ರಮದ ಅಗತ್ಯವಿದ್ದ ಹಲವಾರು ಕಾರ್ಯಗಳನ್ನು ಈಗ ಯಂತ್ರಗಳು ಮತ್ತು ಅಲ್ಗಾರಿದಮ್ಗಳು ನಿರ್ವಹಿಸುತ್ತಿವೆ. ಇದರ ಪರಿಣಾಮವಾಗಿ, ಕಂಪನಿಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಮಾನವ ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿವೆ.
ಹಾಗಂತ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮಾಡಬಾರದು ಅಂತಲ್ಲ, ಕಾಲಕಾಲಕ್ಕೆ ತಕ್ಕ ತಂತ್ರಜ್ಞಾನ, ಕೌಶಲ ಅಳವಡಿಸಿಕೊಳ್ಳಬೇಕಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕೌಶಲಗಳನ್ನು ನವೀಕರಿಸಿಕೊಳ್ಳುವ ಅಗತ್ಯವಿದೆ. ಎಐ, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿಯಂತಹ ಹೊಸ ತಂತ್ರಜ್ಞಾನಗಳಲ್ಲಿ ಪರಿಣತಿ ಗಳಿಸುವುದು ಅವಶ್ಯಕ. ಅಲ್ಲದೆ, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹೆಚ್ಚು ಹೂಡಿಕೆ ಮಾಡಬೇಕು. ಶಿಕ್ಷಣ ಸಂಸ್ಥೆಗಳು ಕೂಡ ಇಂದಿನ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾದ ಪಠ್ಯಕ್ರಮಗಳನ್ನು ರೂಪಿಸಬೇಕು.
ನಿಜವಾಗಿಯೂ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತಿರುವುದು ಯುವಜನರಿಗೆ ದೊಡ್ಡ ಸವಾಲಾಗಿದೆ. ಆದರೆ, ತಂತ್ರಜ್ಞಾನದ ಬದಲಾವಣೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ನಿರಂತರ ಕಲಿಕೆಯ ಮೂಲಕ ಈ ಸಮಸ್ಯೆಯನ್ನು ಎದುರಿಸಬಹುದು. ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸರ್ಕಾರ, ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಆಗ ಮಾತ್ರ ಪರಿಸ್ಥಿತಿ ಸುಧಾರಿಸಲಿದೆ.