ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಎನ್ ಕೌಂಟರ್ ನಡೆದಿದ್ದು, ಕನಿಷ್ಠ 11 ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ.
ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಗುಂಡಿನ ಚಕಮಕಿ ನಡೆದಿದೆ. ಉಗ್ರರ ವಿರುದ್ಧ ಸಿಆರ್ ಪಿಎಫ್ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು ಕನಿಷ್ಠ 11 ಜನ ಉಗ್ರರನ್ನು ಬಲಿ ಪಡೆದಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಓರ್ವ ಸಿಆರ್‌ಪಿಎಫ್ ಯೋಧ ಕೂಡ ಗಾಯಗೊಂಡಿದ್ದಾರೆ. ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ.
ಮೈತೆಯಿ ಮತ್ತು ಬುಡಕಟ್ಟು ಜನಾಂಗವಾದ ಕುಕಿಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಇಲ್ಲಿಯವರೆಗೆ ಅಲ್ಲಿ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ.
ಈ ಮಧ್ಯೆ ಉಗ್ರರ ಉಪಟಳ ಹೆಚ್ಚಾಗಿದೆ. ಶಸ್ತ್ರಸಜ್ಜಿತ ಉಗ್ರರು ಜಿಲ್ಲೆಯ ಬೊರೊಬೆಕ್ರಾ ಉಪವಿಭಾಗದಲ್ಲಿರುವ ಹಲವಾರು ಅಂಗಡಿಗಳಿಗೆ ಬೆಂಕಿ ಹೆಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೆ ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ರೈತರೊಬ್ಬರು ಗಾಯಗೊಂಡಿದ್ದಾರೆ.