ಟೋಕಿಯೋ: ತಾಯಿಯ ಮಮತೆಯಿಂದ ವಂಚಿತವಾಗಿ, ಒಂದು ಬೊಂಬೆಯನ್ನೇ ಅಪ್ಪಿಕೊಂಡು ಕಣ್ಣೀರಿಡುತ್ತಿದ್ದ ಪುಟ್ಟ ಕೋತಿಯ ಕಥೆ ಇದೀಗ ಇಡೀ ಜಗತ್ತಿನ ಕಣ್ಣಾಲಿಗಳನ್ನು ತೇವಗೊಳಿಸಿದೆ. ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ‘ಪಂಚ್’ ಎಂಬ ಹೆಸರಿನ ಈ ಪುಟಾಣಿ ಜಪಾನೀಸ್ ಮಕಾಕ್ ಕೋತಿ ಇದೀಗ ಇಂಟರ್ನೆಟ್ ಸೆನ್ಸೇಷನ್ ಆಗಿದೆ. ಈ ಭಾವನಾತ್ಮಕ ದೃಶ್ಯಗಳಿಗೆ ಮರುಗಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಆಂಡ್ರ್ಯೂ ಟೇಟ್ ಅವರ ಸಹೋದರ ಟ್ರಿಸ್ಟಾನ್ ಟೇಟ್, ಈ ಕೋತಿಯನ್ನು ಖರೀದಿಸಲು ಬರೋಬ್ಬರಿ 2.5 ಲಕ್ಷ ಡಾಲರ್ (ಸುಮಾರು 2 ಕೋಟಿ ರೂ.ಗೂ ಅಧಿಕ) ಆಫರ್ ನೀಡಿರುವುದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಅಮ್ಮನಿಂದ ದೂರಾದ ಮರಿಯ ಅನಾಥ ಪ್ರೇಮ
2025ರ ಜುಲೈನಲ್ಲಿ ಜನಿಸಿದ ಪಂಚ್ ಎಂಬ ಈ ಮರಿ ಮಂಗನನ್ನು ಅದರ ಹೆತ್ತ ತಾಯಿಯೇ ತಿರಸ್ಕರಿಸಿತ್ತು. ಅಮ್ಮನ ಅಪ್ಪುಗೆ, ವಾತ್ಸಲ್ಯದ ಬಿಸುಪು ಇಲ್ಲದೆ ನೊಂದಿದ್ದ ಪಂಚ್‌ಗೆ ಮೃಗಾಲಯದ ಸಿಬ್ಬಂದಿ ‘ಓರಾ-ಮಾಮಾ’ ಬ ಹೆಸರಿನ ಕಿತ್ತಳೆ ಬಣ್ಣದ ಮೃದುವಾದ ಗೊಂಬೆಯೊಂದನ್ನು ನೀಡಿದ್ದರು. ಆ ಗೊಂಬೆಯ ಕೂದಲು ಮಂಗಗಳ ಕೂದಲನ್ನೇ ಹೋಲುತ್ತಿದ್ದರಿಂದ, ಪಂಚ್ ಅದನ್ನೇ ತನ್ನ ತಾಯಿ ಎಂದು ನಂಬಿ ಹಗಲಿರುಳು ಅಪ್ಪಿಕೊಂಡೇ ಇರುತ್ತಿತ್ತು. ಈ ಕರುಣಾಜನಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಹೃದಯ ಗೆದ್ದಿದ್ದವು.
ಕೋಟಿಗಳ ಆಫರ್ ನೀಡಿದ ಟ್ರಿಸ್ಟಾನ್ ಟೇಟ್
ಪಂಚ್ ಅನಾಥವಾಗಿ ಬೊಂಬೆಯನ್ನು ಅಪ್ಪಿಕೊಂಡಿರುವ ವಿಡಿಯೋ ನೋಡಿದ ಟ್ರಿಸ್ಟಾನ್ ಟೇಟ್, ಎಕ್ಸ್ (ಟ್ವಿಟ್ಟರ್) ನಲ್ಲಿ ಮೃಗಾಲಯಕ್ಕೆ ಬಹಿರಂಗ ಆಫರ್ ನೀಡಿದ್ದಾರೆ. “ನಾನು ಮತ್ತು ಆಂಡ್ರ್ಯೂ ಟೇಟ್ ಈ ಮಂಗವನ್ನು ಖರೀದಿಸಲು ಸಿದ್ಧರಿದ್ದೇವೆ. ಇದಕ್ಕೆ ನಾನು 2,50,000 ಡಾಲರ್ ನೀಡುತ್ತೇನೆ, ನಾನು ತಮಾಷೆ ಮಾಡುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ. ಟೇಟ್ ಸಹೋದರರ ಈ ನಡೆಗೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಕೆಲವರು ಅವರ ಈ ಮಾನವೀಯ ಗುಣವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ವನ್ಯಜೀವಿಗಳನ್ನು ಹಣ ಕೊಟ್ಟು ಖಾಸಗಿಯಾಗಿ ಸಾಕುವುದು ಕಾನೂನುಬಾಹಿರ ಮತ್ತು ಅನೈತಿಕ ಎಂದು ಟೀಕಿಸಿದ್ದಾರೆ.
ಒಂಟಿತನದಿಂದ ಗೆಳೆತನದತ್ತ ಪುಟ್ಟ ಪಂಚ್
ಮೃಗಾಲಯದ ಇತ್ತೀಚಿನ ವರದಿಗಳ ಪ್ರಕಾರ, ಪಂಚ್ ಈಗ ನಿಧಾನವಾಗಿ ತನ್ನ ಒಂಟಿತನದಿಂದ ಹೊರಬರುತ್ತಿದೆ. ಆರಂಭದಲ್ಲಿ ಮೃಗಾಲಯದ ಇತರ ಮಂಗಗಳಿಂದ ಕಿರುಕುಳ ಅನುಭವಿಸಿದ್ದ ಈ ಮರಿ, ಈಗ ಇತರ ಮಂಗಗಳೊಂದಿಗೆ ಬೆರೆಯಲು ಕಲಿಯುತ್ತಿದೆ. ಮೃಗಾಲಯದ ಸಿಬ್ಬಂದಿ ಕೂಡ ಪಂಚ್‌ನ ಸಾಮಾಜಿಕ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮಂಗಗಳನ್ನು ಮನುಷ್ಯರು ವೈಯಕ್ತಿಕವಾಗಿ ಸಾಕುವುದಕ್ಕಿಂತ, ಅವುಗಳದ್ದೇ ಸಮೂಹದೊಂದಿಗೆ ಕಾಡಿನ ಅಥವಾ ಮೃಗಾಲಯದ ಪರಿಸರದಲ್ಲಿ ಬೆಳೆಯುವುದು ಅವುಗಳ ಭವಿಷ್ಯಕ್ಕೆ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯವೂ ಹೌದು.
ಇದನ್ನೂ ಓದಿ: ತನ್ನ ಪತನಕ್ಕೆ ತಾನೇ ವಿಲನ್ ಆದ ಬಾಬರ್ ಆಜಂ | ಶೋಯೆಬ್ ಅಖ್ತರ್ ಆಕ್ರೋಶ



















