ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಇಡೀ ನಗರ ನೀರಿನಲ್ಲಿ ಮುಳುಗಡೆಯಾದಂತೆ ಭಾಸವಾಗುತ್ತಿದೆ. ಹಲವೆಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸವಾರರು ಪರದಾಟ ನಡೆಸುತ್ತಿದ್ದಾರೆ. ಹಲವಾರು ಮನೆಗಳಿಗೆ ನೀರು ನುಗ್ಗಿ ನೆಮ್ಮದಿ ಕೆಡಿಸಿದೆ. ಈ ವೇಳೆ ಹೆಬ್ಬಾಳ್ ಶಾಸಕ ಹಾಗೂ ಸಚಿವ ಭೈರತಿ ಸುರೇಶ ಅವರು ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಬ್ಬಾಳ ಕ್ಷೇತ್ರದ ಡಾಲರ್ಸ್ ಕಾಲೋನಿ, ರೈಲ್ವೆ ಅಂಡರ್ ಪಾಸ್, ಪ್ರೆಸ್ಟೀಜ್ ಅಪಾರ್ಟ್ಮೆಂಟ್, ಸಿ.ಐ.ಎಲ್ ಲೇಔಟ್, ಆರ್.ಟಿ ನಗರ ಮುಖ್ಯರಸ್ತೆ, ವೈಟ್ ಟಾಪಿಂಗ್ ಕಾಮಗಾರಿಯನ್ನು ಸಚಿವರು ವೀಕ್ಷಿಸಿದ್ದಾರೆ.
ಈ ವೇಳೆ ಕಾವೇರಿ ಪೈಪ್ ಲೈನ್ ಅಳವಡಿಕೆ, ಕ್ಷೇತ್ರದ ರಾಜಕಾಲುವೆಗಳು ನೆರೆಯಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೇ, ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಸೇರಿದಂತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ ಸೃಷ್ಟಿಸಿರುವ ಅವಾಂತರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ವಲಯ ಆಯುಕ್ತ ಸ್ನೇಹಲ್, ಬಿಡಬ್ಲ್ಯೂ ಎಸ್.ಎಸ್. ಬಿ, ರಾಜಕಾಲುವೆ, ವಿವಿಧ ಇಲಾಖೆ ಅಧಿಕಾರಿಗಳು, ಪಕ್ಷದ ಮುಖಂಡರು, ಅಪಾರ್ಟ್ ಮೆಂಟ್ ನ ನಿವಾಸಿಗಳು, ಸ್ಥಳೀಯರು ಇದ್ದರು.