ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮುನಿಸಿಕೊಂಡು ಬಹಿರಂಗವಾಗಿ ಕಾದಾಟ ನಡೆಸಿದ ಬೆನ್ನಲ್ಲೇ ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ಅವರು ‘ಅಮೆರಿಕ ಪಾರ್ಟಿ’ ಎಂದು ಹೆಸರಿಟ್ಟಿದ್ದಾರೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ‘ಏಕಪಕ್ಷ ಪದ್ಧತಿ’ಗೆ ಸವಾಲು ಹಾಕುವ ಉದ್ದೇಶದಿಂದ ಈ ಪಕ್ಷವನ್ನು ಆರಂಭಿಸಿರುವುದಾಗಿ ಮಸ್ಕ್ ಘೋಷಿಸಿದ್ದಾರೆ.
2024ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ರಾಜಕೀಯ ದಾನಿಯಾಗಿದ್ದ ಮಸ್ಕ್, “ಸರ್ಕಾರಿ ದಕ್ಷತಾ ಇಲಾಖೆ (DOGE)” ಮುಖ್ಯಸ್ಥರಾಗಿ ಸರ್ಕಾರಿ ವೆಚ್ಚ ಕಡಿತ ಮತ್ತು ಫೆಡರಲ್ ಉದ್ಯೋಗ ಕಡಿತದ ಟ್ರಂಪ್ ಅವರ ಪ್ರಯತ್ನಕ್ಕೆ ಸಹಕರಿಸಿದ್ದರು. ಆದರೆ, ಅಮೆರಿಕದ ಸಾಲವನ್ನು ಅತಿಯಾಗಿ ಹೆಚ್ಚಿಸುವ ಟ್ರಂಪ್ ಅವರ ಬೃಹತ್ ದೇಶೀಯ ಖರ್ಚು ಯೋಜನೆಯ(ಬಿಗ್ ಬ್ಯೂಟಿಫುಲ್ ಟ್ಯಾಕ್ಸ್) ಬಗ್ಗೆ ಮಸ್ಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಯೋಜನೆಗೆ ಮತ ಹಾಕಿದ ಶಾಸಕರನ್ನು ಸೋಲಿಸಲು ತಮ್ಮ ಶಕ್ತಿ ಮೀರಿ ಎಲ್ಲವನ್ನೂ ಮಾಡುವುದಾಗಿ ಮಸ್ಕ್ ಪ್ರತಿಜ್ಞೆ ಮಾಡಿದ್ದರು. ಇದೀಗ ತಮ್ಮದೇ ಆದ ರಾಜಕೀಯ ಪಕ್ಷವನ್ನು ರೂಪಿಸುವ ಮೂಲಕ ಆ ಉದ್ದೇಶವನ್ನು ಸಾಧಿಸಲು ಮುಂದಾಗಿದ್ದಾರೆ.
ತಾವು ಮಾಲೀಕತ್ವ ಹೊಂದಿರುವ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಮಸ್ಕ್, “ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯಕ್ಕೆ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷ ಪದ್ಧತಿಯಲ್ಲಿ ಬದುಕುತ್ತಿದ್ದೇವೆ ಎಂದರ್ಥ. ಇಂದು, ನಿಮ್ಮ ಸ್ವಾತಂತ್ರ್ಯವನ್ನು ನಿಮಗೆ ಮರಳಿ ನೀಡಲು ಅಮೆರಿಕ ಪಾರ್ಟಿಯನ್ನು ಸ್ಥಾಪಿಸಲಾಗಿದೆ” ಎಂದು ಘೋಷಿಸಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ (ಜುಲೈ 4) ತಮ್ಮ ಎಕ್ಸ್ ಖಾತೆಯಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದ ಮಸ್ಕ್, “ಎರಡು-ಪಕ್ಷಗಳ (ಕೆಲವರು ಇದನ್ನು ‘ಯೂನಿಪಾರ್ಟಿ’ ಎನ್ನುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯ ಬೇಕೇ?” ಎಂದು ಪ್ರಶ್ನಿಸಿದ್ದರು. ಈ ಸಮೀಕ್ಷೆಗೆ 12 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿದ್ದವು. ಮಸ್ಕ್ ಅವರು “ಏಕಪಕ್ಷ ಪದ್ಧತಿಯನ್ನು ಕೊನೆಗೊಳಿಸಿ” ಎಂದು ಬರೆಯುವುದರ ಜೊತೆಗೆ ಎರಡು ತಲೆಯ ಸರ್ಪದ ಮೀಮ್ ಅನ್ನೂ ಹಂಚಿಕೊಂಡಿದ್ದಾರೆ.
ಹೊಸ ಪಕ್ಷವು 2026ರ ಮಧ್ಯಂತರ ಚುನಾವಣೆಗಳ ಮೇಲೆ ಅಥವಾ ಎರಡು ವರ್ಷಗಳ ನಂತರ ನಡೆಯುವ ಅಧ್ಯಕ್ಷೀಯ ಚುನಾವಣೆ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಒನ್ ಬಿಗ್ ಬ್ಯೂಟಿಫುಲ್ ಬಿಲ್ ಎಂಬ ಟ್ರಂಪ್ ಅವರ ಬೃಹತ್ ದೇಶೀಯ ಕಾರ್ಯಸೂಚಿಯ ಮಸೂದೆ ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಂಡು ಕಾನೂನಾದ ನಂತರ ಮಸ್ಕ್-ಟ್ರಂಪ್ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡಿತ್ತು.
ಈ ಮಸೂದೆಯು ಮುಂದಿನ ದಶಕದಲ್ಲಿ ಅಮೆರಿಕದ ಕೊರತೆಗೆ ಹೆಚ್ಚುವರಿ $3.4 ಟ್ರಿಲಿಯನ್ ಸೇರಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಸ್ಕ್, ಅದನ್ನು ಬೆಂಬಲಿಸಿದ ರಿಪಬ್ಲಿಕನ್ ಪಕ್ಷದವರನ್ನು “ಸಾಲದ ಗುಲಾಮರು” ಎಂದು ಟೀಕಿಸಿದ್ದರು. “ಮುಂದಿನ ವರ್ಷ ಅವರ ಪ್ರೈಮರಿ ಚುನಾವಣೆಯಲ್ಲಿ ಸೋಲಿಸುವುದು ನಾನು ಈ ಭೂಮಿಯಲ್ಲಿ ಮಾಡುವ ಕೊನೆಯ ಕೆಲಸವಾಗಲಿದೆ” ಎಂದೂ ಮಸ್ಕ್ ಶಪಥಗೈದಿದ್ದರು.
ಮಸ್ಕ್ ಅವರ ಈ ಕಟು ಟೀಕೆಯ ನಂತರ, ಟ್ರಂಪ್ ಅವರು ಮಸ್ಕ್ ಅವರನ್ನು ಗಡೀಪಾರು ಮಾಡುವುದಾಗಿ ಮತ್ತು ಅವರ ವ್ಯವಹಾರಗಳಿಗೆ ನೀಡುವ ಫೆಡರಲ್ ನಿಧಿಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. (ಮಸ್ಕ್ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದು, 2002ರಿಂದ ಅಮೆರಿಕ ಪೌರತ್ವವನ್ನು ಹೊಂದಿದ್ದಾರೆ).
ಮೂರನೇ ಪಕ್ಷದ ಅಭಿಯಾನಗಳು ಐತಿಹಾಸಿಕವಾಗಿ ಮತಗಳನ್ನು ಹೇಗೆ ವಿಭಜಿಸಿವೆ ಎಂಬುದನ್ನು ಕೆಲವರು ಉದಾಹರಣೆಗಳನ್ನು ನೀಡಿದ್ದಾರೆ– ಉದಾಹರಣೆಗೆ 1992ರಲ್ಲಿ ಉದ್ಯಮಿ ರಾಸ್ ಪೆರೋಟ್ ಅವರ ಸ್ವತಂತ್ರ ಅಧ್ಯಕ್ಷೀಯ ಸ್ಪರ್ಧೆಯು ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಅವರ ಮರು-ಚುನಾವಣೆಯ ಅವಕಾಶವನ್ನು ಹಾಳುಮಾಡಲು ಸಹಾಯ ಮಾಡಿ, ಡೆಮಾಕ್ರಟಿಕ್ ಅಭ್ಯರ್ಥಿ ಬಿಲ್ ಕ್ಲಿಂಟನ್ ಗೆಲುವಿಗೆ ಕಾರಣವಾಯಿತು. “ನೀವು ರಾಸ್ ಪೆರೋಟ್ ಅವರನ್ನು ಅನುಕರಿಸುತ್ತಿದ್ದೀರಿ ಮತ್ತು ನಮಗೆ ಅದು ಇಷ್ಟವಿಲ್ಲ” ಎಂದು ಟ್ವೀಟರ್ ಬಳಕೆದಾರರು ಮಸ್ಕ್‌ಗೆ ಪ್ರತಿಕ್ರಿಯಿಸಿದ್ದಾರೆ.