ಕಲಬುರಗಿ: ಮಗುವನ್ನು ಶಾಲಾ ಬಸ್ ಗೆ ಹತ್ತಿಸುವ (School Bus) ಸಂದರ್ಭದಲ್ಲಿ ವಿದ್ಯುತ್ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ನಗರದ (Kalaburgi) ಮೋಹನ್ ಲಾಡ್ಜ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಭಾಗ್ಯಶ್ರೀ ವಿದ್ಯುತ್ ತಗುಲಿ (Electric shock) ಗಂಭೀರವಾಗಿ ಗಾಯಗೊಂಡ ಮಹಿಳೆ. ಮಹಿಳೆ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಗ್ಯಶ್ರೀ ಎಂದಿನಂತೆ ತಮ್ಮ ಬುದ್ಧಿಮಾಂದ್ಯ ಮಗನನ್ನು ಶಾಲೆಗೆ ಕಳುಹಿಸುವುದಕ್ಕಾಗಿ ಶಾಲಾ ವಾಹನ ಹತ್ತಿಸಲು ಬಂದಿದ್ದರು. ಆಗ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವೈರ್ ತಗುಲಿದೆ. ಆಗ ಭಾಗ್ಯಶ್ರೀ ರಸ್ತೆಯಲ್ಲೇ ಒದ್ದಾಡಿದ್ದಾರೆ. ಘಟನೆಯಲ್ಲಿ ಕೈ, ಕಾಲು, ಹೊಟ್ಟೆ ಭಾಗ ಸುಟ್ಟು ಹೋಗಿದೆ. ಸ್ಥಳೀಯರು ಮಹಿಳೆಯನ್ನು ಕಾಪಾಡಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಶಾಲಾ ವಾಹನದಲ್ಲಿದ್ದ 11ಕ್ಕೂ ಅಧಿಕ ಮಕ್ಕಳು ಬಚಾವ್ ಆಗಿದ್ದಾರೆ. ಅವರ 11 ವರ್ಷದ ಮಗ ಆಯುಷ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೆಸ್ಕಾಂ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.