ನವದೆಹಲಿ: ದೇಶದ 14 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಎಲ್ಲ ಕ್ಷೇತ್ರಗಳ ಫಲಿತಾಂಶ ಇಂದು ಹೊರ ಬಿದ್ದಿದೆ. ಎನ್ ಡಿಎ ಮೈತ್ರಿ ಭರ್ಜರಿ ಜಯ ಸಾಧಿಸಿದೆ.
ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ (Karnataka), ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ಉತ್ತರಾಖಂಡ, ಉತ್ತರ ಪ್ರದೇಶ (Uttar Pradesh) ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ 48 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಈ ಪೈಕಿ 23 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಜಯ ಸಾಧಿಸಿವೆ. ಇನ್ನುಳಿದ ಸ್ಥಾನಗಳು ಬೇರೆ ಬೇರೆ ಪಕ್ಷಗಳ ಪಾಲಾಗಿವೆ.
ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ. 9 ಸ್ಥಾನಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಒಂದು ಕ್ಷೇತ್ರದಲ್ಲಿ ಮಿತ್ರ ಪಕ್ಷ ಆರ್‌ಎಲ್‌ಡಿ ಹಾಗೂ 2 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಜಯ ಸಾಧಿಸಿದೆ. ಅಸ್ಸಾಂನ 5 ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಎನ್‌ಡಿಎ ಗೆದ್ದಿದೆ.
ಛತ್ತೀಸ್‌ಘಡ, ಗುಜರಾತ್‌ನ ತಲಾ 1 ಕ್ಷೇತ್ರ ಬಿಜೆಪಿ ಗೆದ್ದಿದೆ. ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಮಧ್ಯಪ್ರದೇಶದ 2 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ ಒಂದೊಂದು ಸ್ಥಾನ ಪಡೆದಿವೆ. ಪಂಜಾಬ್‌ನ 4 ಕ್ಷೇತ್ರಗಳಲ್ಲಿ ಮೂರು ಎಎಪಿ, ಒಂದು ಕಾಂಗ್ರೆಸ್ ಪಾಲಾಗಿದೆ. ಉತ್ತರಾಖಂಡದ ಒಂದು ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಮೇಘಾಲಯದಲ್ಲಿ ಎನ್‌ಪಿಪಿ ಗೆಲುವು ಸಾಧಿಸಿದೆ.
ರಾಜಸ್ಥಾನದಲ್ಲಿ 7 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 5ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಭಾರತ್ ಆದಿವಾಸಿ ಪಕ್ಷ ತಲಾ ಒಂದೊಂದು ಸ್ಥಾನಗಳಲ್ಲಿ ಗೆದ್ದಿವೆ. ಬಂಗಾಳದಲ್ಲಿ 6 ಸ್ಥಾನಗಳನ್ನೂ ತೃಣಮೂಲ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ. ಬಿಹಾರದ 4 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಗೆಲುವು ಸಾಧಿಸಿದೆ.