ಬೆಂಗಳೂರು: ರಾಜ್ಯದಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಲಿದೆ. ಮೂರ ಕ್ಷೇತ್ರಗಳು ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿವೆ. ಹೀಗಾಗಿ ಗೆಲುವಿಗಾಗಿ ಸಾಕಷ್ಟು ಹೋರಾಟ ನಡೆಯುತ್ತಿದೆ. ಅದರಲ್ಲೂ ಇಬ್ಬರು ಮಾಜಿ ಸಿಎಂಗಳ ಪುತ್ರರು ಕಣದಲ್ಲಿರುವುದು ಮತ್ತಷ್ಟು ಚುನಾವಣಾ ಕಾವು ಹೆಚ್ಚಿಸಿದೆ.
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬುಧವಾರ ನಡೆಯಲಿದೆ. ಮತದಾನವು ಬೆಳಗ್ಗೆ 7 ಗಂಟಿಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಚನ್ನಟ್ಟಣದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣದಲ್ಲಿದ್ದಾರೆ. ಹೀಗಾಗಿ ಇಬ್ಬರೂ ನಾಯಕರು ತಮ್ಮ ಪುತ್ರರ ಗೆಲುವಿಗೆ ಯತ್ನಿಸುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಡಿಕೆ ಶಿವಕುಮಾರ್‌ಗೆ ಅನಿವಾರ್ಯವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಡಿಕೆ ಸುರೇಶ್ ಸೋಲಿನ ಸೇಡು ತೀರಿಸಿಕೊಳ್ಳಲು ಈ ಮೂಲಕ ಅವರು ಯತ್ನಿಸುತ್ತಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವೈಯಕ್ತಿಕ ಪ್ರತಿಷ್ಠೆ ಇದೆ. ಸಂಡೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ತುಕರಾಂ ಪತ್ನಿ ಅಖಾಡಲ್ಲಿದ್ದಾರೆ. ಅಲ್ಲದೇ, ರೆಡ್ಡಿ ಜೋಶ್ ಅಲ್ಲಿ ಮತ್ತೆ ಆರಂಭವಾಗಿದ್ದು, ಇದು ಸಿಎಂಗೆ ಪ್ರತಿಷ್ಠೆಯ ಕಣವಾಗಿದೆ. ಶಿಗ್ಗಾಂವಿಯಲ್ಲಿ ಜಮೀರ್ ಆಪ್ತ ಯಾಸೀರ್ ಖಾನ್ ಪಠಾಣ್ ಸ್ಪರ್ಧೆ ಮಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ – ಸಿಪಿ ಯೋಗೇಶ್ವರ್, ಎನ್ ಡಿ ಎ – ನಿಖಿಲ್ ಕುಮಾರಸ್ವಾಮಿ, ಎಸ್‌ಡಿಪಿಐ – ಮುಹಮ್ಮದ್ ಫಾಸಿಲ್ ಕಣದಲ್ಲಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ – ಯಾಸೀರ್ ಖಾನ್ ಪಠಾಣ್, ಬಿಜೆಪಿ – ಭರತ್ ಬೊಮ್ಮಾಯಿ, ಕೆಆರ್ ಎಸ್ – ರವಿಕೃಷ್ಣಾ ರೆಡ್ಡಿ ಕಣದಲ್ಲಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ – ಇ ಅನ್ನಪೂರ್ಣ, ಬಿಜೆಪಿ – ಬಂಗಾರು ಹನುಮಂತು ಕಣದಲ್ಲಿದ್ದಾರೆ.
ಚುನಾವಣಾ ಆಯೋಗ ಮೂರು ಕ್ಷೇತ್ರಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ಮತದಾನ ನಡೆಸಲು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಕ್ಷೇತ್ರಗಳಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.