ಉಡುಪಿ : ಜಿಲ್ಲೆಯ ಸಮಸ್ಯೆಗಳಿಗೆ ಬಿಜೆಪಿ ಶಾಸಕರು ಹಾಗೂ ಸಂಸದರು ಮೂಲ ಕಾರಣ. ಕಳೆದ ಮೂರು ಅವಧಿಯಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಆದರೆ ಇಲ್ಲಿಯವರೆಗೆ ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲು ಬಿಜೆಪಿ ಚುನಾಯಿತ ಪ್ರತಿನಿಧಿಗಳಿಗೆ ಸಾಧ್ಯವಾಗಲಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.
ಹಿಂದೆ ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಸಂಬಂಧಿತ ಸಚಿವರು ಹಾಗೂ ಇಲಾಖಾ ಮುಖ್ಯಸ್ಥರುಗಳನ್ನು ಕರೆದು ಸಭೆಗಳನ್ನು ನಡೆಸಿ ಸಿ.ಆರ್.ಝೆಡ್ ವ್ಯಾಪ್ತಿಯಲ್ಲಿ ಮೀನುಗಾರಿಕಾ ದೋಣಿ ಹಾಗೂ ಬೊಟ್ ಗಳು ಸರಾಗವಾಗಿ ಸಂಚಾರ ಮಾಡಲು, ಅಡೆತಡೆಗಳಾಗಿದ್ದ ಮರಳು ದಿಬ್ಬಗಳನ್ನುತೆರವುಗೊಳಿಸುವುದು ಮತ್ತು ತೆರವುಗೊಳಿಸಿದ ಮರಳನ್ನು ಸಾರ್ವಜನಿಕ ಉಪಯೋಗಕ್ಕೆ ಮಾರಾಟ ಮಾಡಲು ಕೇಂದ್ರ ಸರ್ಕಾರದ ಮೂಲಕ ಆದೇಶ ಮಾಡಿಸಿದ್ದರು ಎಂದಿದ್ದಾರೆ.
ರಾಷ್ಟ್ರೀಯ ಹಸಿರು ಪೀಠದಲ್ಲಿ ಈ ಬಗ್ಗೆ ಒಂದಷ್ಟು ಆಕ್ಷೇಪಗಳು ಸಲ್ಲಿಕೆಯಾಗಿ ಮರಳು ದಿಬ್ಬಗಳ ತೆರವಿಗೆ ತಾತ್ಕಾಲಿಕ ನಿಷೇದ ಬಂದ ನಂತರ ಈ ನಿಷೇದವನ್ನು ತೆರವು ಮಾಡಲು ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಿ ಆರ್ ಝೆಡ್ ವ್ಯಾಪ್ತಿಯ ಮರಳು ದಿಬ್ಬಗಳ ತೆರವಿಗೆ ಜಿಲ್ಲೆಯ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಪ್ರಯತ್ನ ಶೂನ್ಯ. ಇವತ್ತು ಮೀನುಗಾರಿಕ ದೋಣಿ ಹಾಗೂ ಬೊಟ್ ಗಳು ಅವಘಡಕ್ಕೆ ತುತ್ತಾಗಿ ಜೀವಹಾನಿಯಾಗಲು ಈ ಮರಳು ದಿಬ್ಬಗಳೂ ಸಹ ಕಾರಣ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ರಾಜ್ಯ ಸರ್ಕಾರವನ್ನು ದೂಷಣೆ ಮಾಡುವ ಇಲ್ಲಾ ಟೀಕಿಸುವ ಮೊದಲು ಕೇಂದ್ರ ಸರ್ಕಾರದಿಂದ ನಿವಾರಣೆಯಾಗಬಲ್ಲ ಸಮಸ್ಯೆಗಳನ್ನು ಮೊದಲು ಪರಿಹಾರ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.