ಬೆಂಗಳೂರು | ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ವೃದ್ದೆಯ ಬರ್ಬರ ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ನೆಲಮಂಗಲ ನಗರದ ಕೋಟೆ ಬೀದಿಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿತ್ತು. ಶೋಭಾ(70) ಕೊಲೆಯಾಗಿದ್ದ ವೃದ್ಧೆ. ಮಾನಸಿಕ ಅಸ್ವಸ್ಥ ಪತಿ ರಂಗನಾಥ್ ರನ್ನು ಪಿಜಿಯೋ ಥೆರಪಿಗೆಂದು ವೈದ್ಯರ ಮನೆಗೆ ಕರೆದುಕೊಂಡ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಆ ವೇಳೆ ಬಂದಿದ್ದ ಖದೀಮ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹತ್ಯೆ ಮಾಡಿದ್ದ ಎನ್ನಲಾಗಿದೆ.
ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣ ಭೇದಿಸಿರುವ ಪೊಲೀಸರು ಹೋಲ್ ಸೇಲ್ ಅಂಗಡಿ ಮಾಲಿಕ ಶಿವಕುಮಾರ್(35)ನನ್ನು ಬಂಧಿಸಿದ್ದಾರೆ. ಬಂಧಿತ ಪಾಪಿ, ಮಾನಸಿಕ ಅಸ್ವಸ್ಥತೆ ಹೊಂದಿದ್ದ ಗಂಡನ ಎದುರಲ್ಲೇ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ. 8 ಲಕ್ಷ ರೂಪಾಯಿ ಸಾಲ ತೀರಿಸಲು ವೃದ್ಧೆಯನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದ ಎನ್ನಲಾಗಿದೆ.
ಕೊಲೆ ಮಾಡಿದ ನಂತರ ಹಣಕ್ಕಾಗಿ ವೃದ್ಧ ದಂಪತಿಯ ಮನೆಯನ್ನೆಲ್ಲ ಪಾಪಿ ಶಿವ ತಡಕಾಡಿದ್ದನಂತೆ. ಹಣ ಸಿಗದಿದ್ದಕ್ಕೆ ಮಾಂಗಲ್ಯ ಸರ ಹಾಗೂ ಕೈಬಳೆ ಕಿತ್ತುಕೊಂಡು ಪರಾರಿಯಾಗಿದ್ದ. 6.5 ಲಕ್ಷ ರೂಪಾಯಿ ಬೆಲೆಬಾಳುವ 450ಗ್ರಾಂ ಚಿನ್ನಾಭರಣ ದೋಚಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸ್ಥಳದ ಅಕ್ಕಪಕ್ಕದಲ್ಲಿ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ವೇಳೆ ಪೊಲೀಸರ ಜೊತೆಯಲ್ಲೇ ಬಂಧಿತ ಆರೋಪಿ ಇದ್ದ ಎನ್ನಲಾಗಿದೆ. ಅನುಮಾನ ಬಾರದಂತೆ ತನ್ನ ಬೈಕ್ ನಲ್ಲಿ ಮನೆ ಸೇರಿದ್ದ. ಬೈಕ್ ನಂಬರ್ ಟ್ರೇಸ್ ವೇಳೆ ಕೊಲೆ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ | ವೃದ್ಧ ಸಾ*ವು



















