ಬೆಂಗಳೂರು: ನಗರದ ಬಹುಕಾಲದ ನಿರೀಕ್ಷೆಯಾದ ಈಜಿಪುರ ಮೇಲ್ಸೇತುವೆ ಕಾಮಗಾರಿ ಈಗ ವೇಗ ಪಡೆದುಕೊಂಡಿದ್ದು, ಆಗಸ್ಟ್ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಅವರ ಮಾಹಿತಿ ಪ್ರಕಾರ, ಮೇಲ್ಸೇತುವೆಯ ಸಂಪೂರ್ಣ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಗುರಿ ಇಡಲಾಗಿದೆ. ಈಗಾಗಲೇ ಕಾಮಗಾರಿ ಶೇಕಡಾ 70ರಷ್ಟು ಪೂರ್ಣಗೊಂಡಿದೆ. ಸೆಂಟ್ ಜಾನ್ಸ್ ಬಳಿ ಪಿಲ್ಲರ್ ಅಳವಡಿಕೆಗೆ ಇದ್ದ ತೊಡಕು ನಿವಾರಣೆಯಾಗಿದ್ದು, ಸೆಗ್ಮೆಂಟ್ ಕಾಸ್ಟಿಂಗ್ ಕಾರ್ಯವನ್ನು ವೇಗಗೊಳಿಸಲಾಗಿದೆ. 24 ಗಂಟೆಗಳ ಕಾಲ ನಿರಂತರವಾಗಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರ್ಯಾಂಪ್ ಕಾಮಗಾರಿಗೂ ವೇಗ ನೀಡಲಾಗಿದ್ದು, ವಿಶೇಷವಾಗಿ ಮಡಿವಾಳ ಕಡೆ ಡೌನ್ ರ್ಯಾಂಪ್ ಅನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ. ಸಂಚಾರಿ ಪೊಲೀಸ್ ಇಲಾಖೆಯಿಂದ ಭಾಗಶಃ ರಸ್ತೆ ನಿರ್ಬಂಧಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆಯೂ ಮುಂದುವರಿದಿದೆ. ಮಳೆನೀರು ಸರಾಗವಾಗಿ ಹರಿಯಲು ಪೈಪ್‌ಲೈನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೇಂದ್ರೀಯ ಸದನ್ ಹಾಗೂ ಆಸ್ಟ್ರೋ ಫಿಜಿಕ್ಸ್ ಪ್ರದೇಶದಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೂ ಕ್ರಮ ವಹಿಸಲು ಸೂಚಿಸಲಾಗಿದೆ.
ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದವರೆಗೆ ಸುಮಾರು 2.5 ಕಿ.ಮೀ ಉದ್ದದ ಈ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು, ನಗರದಲ್ಲಿನ ಪ್ರಮುಖ 7 ಜಂಕ್ಷನ್‌ಗಳ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲಿದೆ.
ಸುಮಾರು 203 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆ ಕಳೆದ 8 ವರ್ಷಗಳಿಂದ ವಿಳಂಬವಾಗಿತ್ತು. ಇದೀಗ ಪ್ರತ್ಯೇಕ ಇಂಜಿನಿಯರ್ ತಂಡ ರಚಿಸಿ ಕಾಮಗಾರಿಗೆ ವೇಗ ನೀಡಲಾಗಿದೆ. ಈವರೆಗೆ ಸುಮಾರು 70 ರಷ್ಟು ಕಾಮಗಾರಿ ನಿರ್ಮಾಣ ಪೂರ್ಣಗೊಂಡಿದೆ ಎಂದು ಜಿಬಿಎ ಮುಖ್ಯ ಇಂಜಿನಿಯರ್ ರಾಘವೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ : ಏಪ್ರಿಲ್ 7ಕ್ಕೆ ದ್ವಿತೀಯ PUC, ಏಪ್ರಿಲ್ 24ಕ್ಕೆ SSLC ಫಲಿತಾಂಶ ಪ್ರಕಟ



















