ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಆರೋಪ ಎದುರಿಸುತ್ತಿರುವ ಮೂವರಿಗೆ ಜಾಮೀನು ಸಿಕ್ಕಿದೆ.
ಆರೋಪಿಗಳಾದ ಅಶ್ವತ್, ವಿಶ್ವಮೂರ್ತಿ, ವಿಶ್ವಗೆ ಮೂರನೆ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶಾಸಕರು, 150 ಅನಾಮಿಕ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದರು. ನಿನ್ನೆ ಈ ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳದಲ್ಲೇ ವಿಶ್ವಮೂರ್ತಿ, ಅಶ್ವತ್ ಹಾಗೂ ವಿಶ್ವ ಎಂಬುವವರನ್ನು ವಶಕ್ಕೆ ಪಡೆದಿದ್ದರು. ಮುನಿರತ್ನ ಬೆಂಬಲಿಗರೇ ಮೂವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳ ಪರ ಹಿರಿಯ ವಕೀಲ ಸೂರ್ಯ ಮುಕುಂದರಾಜ್, ಸಂಜಯ್ ಯಾದವ್ ವಾದ ಮಂಡಿಸಿದ್ದರು. ವಾದ ಆಲಿಸಿರುವ ನ್ಯಾಯಾಧೀಶರು, ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಆರೋಪಿಗಳಿಗೆ 4,500 ರೂ. ಶ್ಯೂರಿಟಿ, ಐವತ್ತು ಸಾವಿರ ಬಾಂಡ್, ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿದೆ