ಬೆಂಗಳೂರು: ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಕೆಯಾಗಿದ್ದು, ಶಿಕ್ಷಕರು ಪರದಾಡುವಂತಾಗಿದೆ.
ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಉಚಿತ ಮೊಟ್ಟೆ ವಿತರಿಸುವ ಯೋಜನೆ ಜಾರಿಗೆ ತಂದಿತ್ತು. ಇದಕ್ಕಾಗಿ ಸರ್ಕಾರ ದರ ನಿಗದಿ ಮಾಡಿತ್ತು. ಆದರೆ, ಈಗ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಏರಿಕೆಯಾಗಿದೆ. ಇದರಿಂದಾಗಿ ಹೆಚ್ಚುವರಿ ಹಣವನ್ನು ಶಿಕ್ಷಕರೇ ಭರಿಸುವ ಪರಿಸ್ಥಿತಿ ಎದುರಾಗಿದೆ. ಇದು ಶಿಕ್ಷಕರ ಸಂಕಷ್ಟಕ್ಕೆ ಕಾರಣವಾಗುತ್ತಿದೆ.
ಮೊಟ್ಟೆಯ ದರ ಹಿಂದೆ 5.30 ರೂ. ಇತ್ತು. ಆದರೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ 6 ರೂ. ನಿಂದ 6.80ರೂ.ಗೆ ಮೊಟ್ಟೆಯ ದರ ಏರಿಕೆಯಾಗಿದೆ. ಆದರೆ, ಸರ್ಕಾರ ಪ್ರತಿ ಮೊಟ್ಟೆಯ ಖರೀದಿಗೆ 6 ರೂ. ನಿಗದಿ ಮಾಡಿದೆ. ಇದರೊಂದಿಗೆ ಮೊಟ್ಟೆ ಬೇಯಿಸುವ ಹೊಣೆ ಕೂಡ ಶಿಕ್ಷಕರದ್ದು. ಇದಕ್ಕೆ ಕೂಡ ಖರ್ಚಾಗುತ್ತದೆ. ಹೀಗಾಗಿ ಹೆಚ್ಚಿನ ಬೆಲೆಯನ್ನು ಶಿಕ್ಷಕರೇ ಭರಿಸುವಂತಾಗಿದೆ. ಕೂಡಲೇ ಸರ್ಕಾರ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತಿದ್ದಾರೆ.