ಪುತ್ತೂರು: ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಕ್ಷಣ ನೀಡುವ ಕಾರ್ಯಕ್ಕೆ ಕೈ ಹಾಕಲಾಗಿದೆ.
ಮುಂದಿನ ಹಿಂದೂ ಪೀಳಿಗೆಯನ್ನು ಧರ್ಮ ಜಾಗೃತರನ್ನಾಗಿ ಮಾಡುವ ಮಹಾ ಯೋಜನೆಯೊಂದು ಈಗ ನಡೆಯುತ್ತಿದೆ. ಪುತ್ತೂರು ತಾಲೂಕಿನಲ್ಲಿ ಈ ಯೋಜನೆ ಆರಂಭದ ಹಂತದಲ್ಲಿದ್ದು, ಇದು ಅನುಷ್ಠಾನಗೊಂಡಲ್ಲಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ವಿಸ್ತರಿಸುವ ಕನಸು ಹೊಂದಲಾಗಿದೆ.
ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ (Subrahmanya Nattoja) ಆಸಕ್ತಿಯ ಕಾರಣದಿಂದ ಹುಟ್ಟಿಕೊಂಡ ಯೋಜನೆಗೆ ಹಿಂದೂ ಸಮಾಜದ ಬಹುತೇಕ ಜಾತಿ ಸಂಘಟನೆಗಳು ಕೈಜೋಡಿಸಿವೆ. ಸನಾತನ ಪರಂಪರೆಯ ಮೌಲ್ಯಗಳನ್ನು ಪ್ರತಿಪಾದಿಸುವ ಧಾರ್ಮಿಕ ಶಿಕ್ಷಣ ನೀಡಲು ವೇದಿಕೆ ಸಜ್ಜಾಗಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಳದ ನಟರಾಜ (Nataraja of Mahalingeshwar temple)ವೇದಿಕೆಯಲ್ಲಿ ಈ ಕುರಿತು ಸಭೆ ಕೂಡ ನಡೆದಿದೆ. 26 ಜಾತಿಯ ಸಂಘಟನೆಗಳ ನಾಯಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಶ್ರದ್ಧಾ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ನಿರ್ದಿಷ್ಟ ಅವಧಿಯ ಧಾರ್ಮಿಕ ಶಿಕ್ಷಣ ತರಗತಿ ನಡೆಸಲಾಗುತ್ತದೆ. ಶಿಕ್ಷಕರು ಪಠ್ಯ ಆಧಾರಿತ ಪಠ್ಯ ಮಾಡುತ್ತಾರೆ.
ತರಗತಿಗಳಲ್ಲಿ ಆಯಾ ಗ್ರಾಮಗಳ ಮಕ್ಕಳು ಭಾಗವಹಿಸುವಂತೆ ಮಾಡುವ ಹೊಣೆ ಸ್ಥಳೀಯ ಸಮಿತಿಗಳದ್ದಾಗಿದೆ. ದೇಣಿಗೆ ಮತ್ತಿತರ ಮೂಲಗಳಿಂದ ಹಣ ಸಂಗ್ರಹಿಸಿ, ಶಿಕ್ಷಕರಿಗೆ ವೇತನ ನೀಡುವ ಗುರಿ ಹೊಂದಲಾಗಿದೆ.