ಬೆಂಗಳೂರು: ಕಾರ್ಪೊರೇಟ್-ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನದ ಅಡಿಯಲ್ಲಿ ಶಾಲೆಗಳ ನಿರ್ಮಾಣದ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಿದ್ದು, ಹೀಗೆ ನಿರ್ಮಿಸಲಾಗುವ ಶಾಲೆಗಳಿಗೆ ಆಯಾ ಕಂಪೆನಿಗಳ ಹೆಸರಿಡಲಾಗುವುದು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸ ಮ್ಮಾನಿಸಿ ಅವರು ಮಾತನಾಡಿದರು.
”ಮುಂದಿನ ಸಚಿವ ಸಂಪುಟದಲ್ಲಿ ಸಿಎಸ್‌ಆರ್ ಅನುದಾನದಿಂದ ಶಾಲೆಗಳ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗುವುದು. ಯಾರು ಶಾಲೆ ನಿರ್ಮಾಣ ಮಾಡುತ್ತಾರೋ ಅವರ ಕಂಪೆನಿ ಹೆಸರನ್ನೇ ಇಟ್ಟುಕೊಳ್ಳಬಹುದು ಎಂದು ಹೇಳಿದ್ದೇವೆ. ಆದರೆ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಬೇಕು ಹಾಗೂ ನಗರ ಮಾದರಿಯಲ್ಲಿ ಸಿಬಿಎಸ್‌ಇ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಆಶಯ. ಈಗಾಗಲೇ ಒಂದಿಷ್ಟು ಶಾಲೆಗಳು ಪ್ರಾರಂಭವಾಗಿವೆ. ಈ ಅನುದಾನದಲ್ಲಿ ಸುಮಾರು 2 ಸಾವಿರ ಶಾಲೆ ನಿರ್ಮಿಸುವ ಗುರಿ ಇದೆ’ ಎಂದು ಹೇಳಿದ್ದಾರೆ.
“4 ಕ್ಷೇತ್ರಗಳಿಗೆ ಮುಂದಿನ ವರ್ಷ ಚುನಾವಣೆ”
ಶಿಕ್ಷಣ ಕ್ಷೇತ್ರದ ಪರಿಷತ್ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈ ತಿಂಗಳ ಒಳಗಾಗಿ ಅರ್ಜಿ ಕರೆಯಲಾಗುವುದು. ಅನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಜಿ.ಸಿ.ಚಂದ್ರಶೇಖರ್ ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಕಿವಿಮಾತು ತಿಳಿಸಿದ್ದಾರೆ.